ಸುಳ್ಯ: ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಶನಿವಾರ ಮಾಣಿ–ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೊಳುಬೈಲು ಬಳಿ ನಡೆದಿದೆ.
ಸುಳ್ಯದ ಹಳೆಗೇಟು ನಿವಾಸಿ ವಸಂತ (ಚಂದ್ರಶೇಖರ) ಅವರು ಮನೆಯವರೊಂದಿಗೆ ಗೃಹಪ್ರವೇಶದ ಹಿನ್ನಲೆಯಲ್ಲಿ ಬಟ್ಟೆ ಖರೀದಿಸಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕೆಎ–01 ಎಂಜಿ 2133 ಸಂಖ್ಯೆಯ ಕಾರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ಪರಿಣಾಮ ವಸಂತ ಅವರ ಕಾರು ನಿಯಂತ್ರಣ ತಪ್ಪಿ ಎರಡೂ ವಾಹನಗಳು ಜಖಂಗೊಂಡಿವೆ.
ಅಪಘಾತದಲ್ಲಿ ವಸಂತ, ರಮ್ಯ, ರಶ್ಮಿ ಹಾಗೂ ಆದ್ವಿತ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಮಂಜುನಾಥ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಜಯರಾಮ ಎಂದು ಗುರುತಿಸಲಾಗಿದೆ.
ಅಪಘಾತ ಎಸಗಿದ ಕಾರಿನ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದನೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಪಘಾತದ ಬಳಿಕವೂ ಚಾಲಕ ಅಸಂಬದ್ಧವಾಗಿ ವರ್ತಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!