
ಪುತ್ತೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸೆಂಟ್ರಲ್ ಇಂಟೆಲಿಜೆನ್ಸ್ ಸಂಸ್ಥೆಯ ಕಚೇರಿ ಆರಂಭಿಸಲು ಪುತ್ತೂರಿನಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. ಮುಂದಿನ ಒಂದು ವರ್ಷದೊಳಗೆ ಕಚೇರಿ ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ನಗರದ ಪಡ್ನೂರು ಪ್ರದೇಶದಲ್ಲಿ 0.44 ಸೆಂಟ್ಸ್ ಜಾಗವನ್ನು ಈ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಇಂಟೆಲಿಜೆನ್ಸ್ ಇಲಾಖೆಯ ಎಸ್‌ಪಿ ಅವರು ಕಚೇರಿ ಆರಂಭಕ್ಕೆ ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದರು. ಅದರ ಅನ್ವಯ ಪಡ್ನೂರಿನ ಜಾಗವನ್ನು ನೀಡಲಾಗಿದೆ ಎಂದು ಶಾಸಕ ಹೇಳಿದರು.
ಪುತ್ತೂರಿನಲ್ಲಿ ಕೇಂದ್ರ ಸರ್ಕಾರದ ಅಧೀನದ ಗುಪ್ತಚರ ಇಲಾಖೆಯ ಕಚೇರಿ ಆರಂಭಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯೇ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿವೇಶನಕ್ಕೆ ಸಂಬಂಧಿಸಿದ ಪಹಣಿ ಪತ್ರವನ್ನು ಅಧಿಕಾರಿಗೆ ಶಾಸಕ ಅಶೋಕ್ ರೈ ಹಸ್ತಾಂತರಿಸಿದರು. ತಹಶೀಲ್ದಾರ್ ಕೂಡ್ಲಿಗಿ ಉಪಸ್ಥಿತರಿದ್ದರು.







