
ಮಂಗಳೂರು, ಫೆ.27: ಹೈದರಾಬಾದ್‌ನಲ್ಲಿ ನೆಲೆಸಿ ದೇಶದಾದ್ಯಂತ ಸೈಬರ್ ವಂಚನೆ ನಡೆಸುತ್ತಿದ್ದ ತಂಡವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಭೇದಿಸಿದ್ದು, 6 ಆರೋಪಿತರನ್ನು ಬಂಧಿಸಿದೆ.
ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 09/2026 ಅಡಿಯಲ್ಲಿ ಐಟಿ ಕಾಯ್ದೆ 66(2) ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ
ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಷಾಲ್ ಅವರು ತಮ್ಮ ಸ್ನೇಹಿತ ಇಬ್ರಾಹಿಂ ಎಂಬಾತನ ವಿನಂತಿಗೆ ಅನುಗುಣವಾಗಿ ವ್ಯವಹಾರ ಉದ್ದೇಶಕ್ಕಾಗಿ ತಮ್ಮ ಕರೆಂಟ್ ಖಾತೆಯನ್ನು ನೀಡಿದ್ದರು. ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್ ಸಹ ಹಸ್ತಾಂತರಿಸಿದ್ದರು. ಬಳಿಕ ಆ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್‌ಗೆ ತೆರಳಿ ಕಾರ್ಯಾಚರಣೆ
ಪ್ರಕರಣದ ತನಿಖೆ ವೇಳೆ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಹೈದರಾಬಾದ್‌ನಲ್ಲಿ ಸೈಬರ್ ವಂಚನಾ ಜಾಲ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಯಿತು. ಸೈಬರ್ ಅಪರಾಧ ಠಾಣೆಯ ತಂಡ ಹೈದರಾಬಾದ್‌ಗೆ ತೆರಳಿ ಐದು ಮಂದಿಯನ್ನು ಅಲ್ಲಿ ಹಾಗೂ ಒಬ್ಬ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತರು
ಶೇಖ್ ಕರೀಮುಲ್ಲಾ @ ರಸೂಲ್ (27), ನೆಲ್ಲೂರು, ಆಂಧ್ರ ಪ್ರದೇಶ
ಬುಡಿದಿನ್ನೆ ವಂಶಿ @ ಗುರು (21), ಕರ್ನೂಲ್, ಆಂಧ್ರ ಪ್ರದೇಶ
ಪಂಡಿತಿ ಕ್ರಾಂತಿ ಕುಮಾರ್ (36), ಹೈದರಾಬಾದ್, ತೆಲಂಗಾಣ
ಇಬ್ರಾಹಿಂ (35), ಮುಲ್ಕಿ, ಮಂಗಳೂರು
ಬಡೆ ಶ್ರೀನಿವಾಸ್ (38), ಹೈದರಾಬಾದ್, ತೆಲಂಗಾಣ
ಉತ್ಸಲ ಸಂತೋಷ್ ಕೃಷ್ಣ (35), ನೆಲ್ಲೂರು, ಆಂಧ್ರ ಪ್ರದೇಶ
ವಶಪಡಿಸಿಕೊಂಡ ವಸ್ತುಗಳು
18 ಮೊಬೈಲ್ ಫೋನ್‌ಗಳು
1 ಲ್ಯಾಪ್‌ಟಾಪ್
12 ಸಿಮ್ ಕಾರ್ಡ್‌ಗಳು
15 ಚೆಕ್‌ಬುಕ್‌ಗಳು
12 ಬ್ಯಾಂಕ್ ಪಾಸ್‌ಬುಕ್‌ಗಳು
18 ಡೆಬಿಟ್ ಕಾರ್ಡ್‌ಗಳು
ವಂಚನಾ ವಿಧಾನ
ಆರೋಪಿತರು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ನೀಡಿ ಬ್ಯಾಂಕ್ ಖಾತೆದಾರರಿಗೆ 4ರಿಂದ 6 ಶೇಕಡಾ ಕಮೀಷನ್ ನೀಡುವುದಾಗಿ ಭರವಸೆ ನೀಡುತ್ತಿದ್ದರು. ದುರಾಸೆಗೆ ಒಳಗಾದ ಖಾತೆದಾರರಿಂದ ಸಂಪೂರ್ಣ ಖಾತೆ ವಿವರಗಳು ಹಾಗೂ ಒಟಿಪಿ ಪಡೆದು, ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
NCRP ಪೋರ್ಟಲ್‌ನಲ್ಲಿ ನೂರಾರು ದೂರುಗಳು
ಒಂದು ಬ್ಯಾಂಕ್ ಖಾತೆಯ ಮೇಲೆಯೇ ದೇಶದಾದ್ಯಂತ NCRP ಪೋರ್ಟಲ್‌ನಲ್ಲಿ 5 ದೂರುಗಳು ದಾಖಲಾಗಿವೆ. ಆರೋಪಿತರ ವಶದಲ್ಲಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಪರಿಶೀಲನೆ ವೇಳೆ ಒಟ್ಟು 72 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿದ್ದು, ಅದರಲ್ಲಿ 30 ಖಾತೆಗಳ ಮೇಲೆ 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.
ಫೆ.26ರಂದು ಒಂದೇ ದಿನ ಈ ತಂಡವು 2 ಕೋಟಿ ರೂಪಾಯಿಗೂ ಅಧಿಕ ಹಣ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಸೈಬರ್ ವಂಚನೆಗೆ ಬಳಸಲಾದ ಖಾತೆಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.







