ಥಾಣೆ (ಮಹಾರಾಷ್ಟ್ರ), ಫೆ. 27: ತನ್ನ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ 2.6 ಕೋಟಿ ರೂಪಾಯಿಗಳ ಅನಧಿಕೃತ ವಹಿವಾಟು ನಡೆದಿದೆ ಎಂದು ಆರೋಪಿಸಿ ಥಾಣೆ ಜಿಲ್ಲೆಯ ಡೊಂಬಿವಲಿಯ ರಿಕ್ಷಾ ಚಾಲಕರೊಬ್ಬರ ಪುತ್ರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಕಲ್ಯಾಣದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಎಸ್ಸಿ ವಿದ್ಯಾರ್ಥಿನಿಯಾಗಿರುವ ನಿಧಿ ತಿವಾರಿ, ಬೃಹತ್ ಕಾನೂನುಬಾಹಿರ ವಹಿವಾಟುಗಳನ್ನು ನಡೆಸಲು ತನ್ನ ವೈಯಕ್ತಿಕ ವಿವರಗಳ ದುರ್ಬಳಕೆ ಮಾಡಲಾಗಿದೆ. ಇದು ಉತ್ತರಾಖಂಡ ಮೂಲದ ವಂಚನೆ ಹಗರಣಕ್ಕೆ ಸಂಬಂಧಿಸಿರಬಹುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ

ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತನೊಬ್ಬ ಬ್ಯಾಂಕ್ ಖಾತೆ ತೆರೆಯಲು ನನಗೆ ನೆರವಾಗಲು ಮುಂದಾಗಿದ್ದ ಮತ್ತು ಇದಕ್ಕಾಗಿ ಸ್ವಲ್ಪ ಹಣವನ್ನೂ ನೀಡಿದ್ದ. ಬಳಿಕ ನನ್ನ ಬ್ಯಾಂಕ್ ಖಾತೆಯನ್ನು ನನಗೆ ಗೊತ್ತಿಲ್ಲದೆ ವಿವಿಧ ವಹಿವಾಟುಗಳಿಗೆ ಬಳಸಲಾಗಿದೆ. ನಾನು ಪರಿಶೀಲಿಸಿದಾಗ ನನ್ನ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಹಲವಾರು ಖಾತೆಗಳು ತೆರೆಯಲ್ಪಟ್ಟಿರುವುದು ಕಂಡುಬಂದಿದೆ’ ಎಂದು ಅವರು ತಿಳಿಸಿದ್ದಾರೆ.

ತನ್ನ ಖಾತೆಯಲ್ಲಿ ದಿಢೀರ್ ಹಣ ಜಮೆಯಾಗಿರುವ ಬಗ್ಗೆ ಸ್ನೇಹಿತನನ್ನು ಪ್ರಶ್ನಿಸಿದಾಗ ಆತ ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದ್ದು, ಏನೂ ಆಗುವುದಿಲ್ಲ ಎಂದು ಹೇಳಿದ್ದಾನೆ. ಈ ಪೈಕಿ ಹಲವಾರು ಖಾತೆಗಳನ್ನು ಉತ್ತರಾಖಂಡದಲ್ಲಿ ಸೈಬ‌ರ್ ಅಪರಾಧಗಳ ತನಿಖೆ ನಡೆಸುತ್ತಿರುವ ಕೇಂದ್ರೀಯ ಸಂಸ್ಥೆಗಳು ಸ್ಥಗಿತಗೊಳಿಸಿರುವುದು ತಿಳಿದಾಗ ತನಗೆ ಸಂಶಯ ಮೂಡಿತು ಎಂದು ಹೇಳಿದ್ದಾರೆ. ಇಂತಹ ವಹಿವಾಟುಗಳಿಗೆ ತನ್ನ ಗುರುತಿನ ದುರ್ಬಳಕೆಯ ಹಿಂದೆ ಥಾಣೆ ಜಿಲ್ಲೆಯ ಬದ್ಲಾಪುರ ಹಾಗೂ ಉಲ್ಲಾಸನಗರದ ಇಬ್ಬರು ವ್ಯಕ್ತಿಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ

ತನಿಖಾ ಸಂಸ್ಥೆಗಳು ತನ್ನ ಮೇಲೆಯೇ ಆರೋಪ ಹೊರಿಸುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಿವಾರಿ ದೂರು ಸಲ್ಲಿಸಿರುವುದನ್ನು ದೃಢಪಡಿಸಿದ ಪೊಲೀಸರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!