
ನವದೆಹಲಿ, ಮಾ.1: ದೇಶದಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಸಂಬಂಧಿಸಿದಂತೆ ಹೊಸ ಹಾಗೂ ಕಠಿಣ ನಿಯಮಗಳನ್ನು ಇಂದಿನಿಂದ ಜಾರಿಗೆ ತಂದಿದೆ. ‘ಟೆಲಿಕಾಂ ಕಾಯ್ದೆ 2023’ರ ಅಡಿಯಲ್ಲಿ ದೂರಸಂಪರ್ಕ ಇಲಾಖೆ ‘ಸಿಮ್ ಬೈಂಡಿಂಗ್’ ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ನಿಯಮದ ಪ್ರಕಾರ, ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಖಾತೆಗಳು ಕಾರ್ಯನಿರ್ವಹಿಸಲು ಆ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್ ಸಂಬಂಧಿತ ಮೊಬೈಲ್‌ನಲ್ಲಿ ಇರಬೇಕು. ಸಿಮ್ ಕಾರ್ಡ್ ತೆಗೆದರೆ, ನಿಷ್ಕ್ರಿಯಗೊಂಡರೆ ಅಥವಾ ಸೇವೆ ಸ್ಥಗಿತಗೊಂಡರೆ, ಆ ಸಂಖ್ಯೆಯ ಮೆಸೇಜಿಂಗ್ ಖಾತೆಯ ಕಾರ್ಯನಿರ್ವಹಣೆ ಕೂಡ ಸ್ಥಗಿತವಾಗಲಿದೆ.
ಸರ್ಕಾರದ ಅಭಿಪ್ರಾಯದಂತೆ, ಈ ಕ್ರಮದಿಂದ ಕದ್ದ OTP ಗಳನ್ನು ಬಳಸಿ ನಡೆಸುವ ಆನ್‌ಲೈನ್ ವಂಚನೆಗಳಿಗೆ ಕಡಿವಾಣ ಬೀಳಲಿದೆ. ಸೈಬರ್ ಅಪರಾಧಗಳನ್ನು ತಡೆಯಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಲಾಗಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ‘ಸಿಮ್ ಬೈಂಡಿಂಗ್’ ಜಾರಿಗೆ ನೀಡಿರುವ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಬಳಕೆಯಲ್ಲಿಯೂ ಬದಲಾವಣೆ ತರಲಾಗಿದೆ. ಇಂದಿನಿಂದ ಪ್ರತಿ ಆರು ಗಂಟೆಗಳಿಗೊಮ್ಮೆ ವೆಬ್ ಮತ್ತು ಡೆಸ್ಕ್‌ಟಾಪ್ ಸೆಷನ್‌ಗಳು ಸ್ವಯಂಚಾಲಿತವಾಗಿ ಲಾಗೌಟ್ ಆಗಲಿವೆ. ಮರುಬಳಕೆಗೆ ಬಳಕೆದಾರರು ತಮ್ಮ ಮೊಬೈಲ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ OTP ಪರಿಶೀಲನೆ ನಡೆಸಬೇಕಾಗುತ್ತದೆ.
ಈ ನಿಯಮಗಳು ಸಾಮಾನ್ಯ ಬಳಕೆದಾರರಲ್ಲಿ ಆತಂಕ ಹುಟ್ಟಿಸುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ತಮ್ಮ ಪ್ರಾಥಮಿಕ ಮೊಬೈಲ್‌ನಲ್ಲಿ ಸಂಬಂಧಿತ ಸಿಮ್ ಕಾರ್ಡ್ ಇರಿಸಿಕೊಳ್ಳುವುದು ಹಾಗೂ ಮೆಸೇಜಿಂಗ್ ಆ್ಯಪ್‌ಗಳನ್ನು ನವೀಕರಿಸಿರುವುದು ಅಗತ್ಯವೆಂದು ಸೂಚಿಸಲಾಗಿದೆ.







