
ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆ ಒಮನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ವರದಿಯಾಗಿದೆ.
ಮೃತರನ್ನು ಸೋಮೇಶ್ವರ ನಿವಾಸಿ ಪುನೀತ್ ಪೂಜಾರಿ (32) ಎಂದು ಗುರುತಿಸಲಾಗಿದೆ. ಅವರು ಕಳೆದ ಒಂದೂವರೆ ವರ್ಷಗಳಿಂದ ಒಮನ್‌ನಲ್ಲಿ ಲಿಫ್ಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ಮತ್ತೆ ಕೆಲಸಕ್ಕೆ ಮರಳಿದ್ದರು ಎಂದು ತಿಳಿದು ಬಂದಿದೆ.
ಸೋಮೇಶ್ವರದ ಚಂದ್ರ–ದೀಪಾ ದಂಪತಿಯ ಪುತ್ರನಾದ ಪುನೀತ್, ಕಳೆದ ನಾಲ್ಕು ವರ್ಷಗಳಿಂದ ಉರ್ವಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದನು. ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಯುವತಿಯೊಂದಿಗೆ ತೆಗೆದ ಚಿತ್ರಗಳನ್ನು ಹಂಚಿಕೊಂಡಿದ್ದನು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವತಿ ದೂರವಾಣಿ ಕರೆಗಳಿಗೆ ಸ್ಪಂದಿಸದೇ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಮನನೊಂದಿದ್ದ ಪುನೀತ್ ಈ ದುರಂತ ನಿರ್ಧಾರ ಕೈಗೊಂಡಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸೂಚನೆ: ಮಾನಸಿಕ ಒತ್ತಡ ಅಥವಾ ನಿರಾಶೆಯಿಂದ ಬಳಲುತ್ತಿರುವವರು ಸಹಾಯಕ್ಕಾಗಿ ಕಿರಣ್ ಮಾನಸಿಕ ಆರೋಗ್ಯ ಸಹಾಯವಾಣಿ (1800-599-0019) ಅಥವಾ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು. ನೀವು ಒಬ್ಬರಲ್ಲ.








