
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯೂ ಸೇರಿದ್ದಾರೆ. ಈ ದಾಳಿಯಲ್ಲಿ ಇತರೆ 14 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ‘ಸವಿತಾ ಶಾನ್’ ಎಂದು ಗುರುತಿಸಲಾಗಿದೆ. ಸೋಮವಾರ ಅಧಿಕಾರಿಗಳು ಆಕೆಯ ಗುರುತು ಬಹಿರಂಗಪಡಿಸಿದ್ದಾರೆ.
ಈ ಕುರಿತು ಟೆಕ್ಸಾಸ್ ವಿಶ್ವವಿದ್ಯಾಲಯದ ಅಧ್ಯಕ್ಷ ಜಿಮ್ ಡೇವಿಸ್ ಕ್ಯಾಂಪಸ್ ಸಮುದಾಯಕ್ಕೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. “ಆಕೆ ಜಗತ್ತಿನಲ್ಲಿ ಬದಲಾವಣೆ ತರಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ. ಪೋಷಕರಿಗೆ ಪ್ರೀತಿಯ ಮಗಳು ಹಾಗೂ ಅನೇಕರಿಗೆ ನಂಬಿಕಸ್ಥ ಸ್ನೇಹಿತೆಯಾಗಿದ್ದಳು,” ಎಂದು ಅವರು ಸ್ಮರಿಸಿದ್ದಾರೆ.
“ಈ ಆಘಾತಕಾರಿ ಘಟನೆ ನಮ್ಮನ್ನು ತೀವ್ರವಾಗಿ ಬೆಚ್ಚಿಬೀಳಿಸಿದೆ. ಆಕೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ.
ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದು, ದುಷ್ಕರ್ಮಿಯ ಬಂಧನ ಹಾಗೂ ದಾಳಿಯ ಹಿನ್ನಲೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.








