
ಪುತ್ತೂರು: ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ ಚಿನ್ನಾಭರಣ ಕಳವಾಗಿರುವ ಕುರಿತು ಮಹಿಳೆಯೊಬ್ಬರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೋಳ್ತಾಡು ಗ್ರಾಮದ ಬಾರೆಬೆಟ್ಟು ನಿವಾಸಿ ವಸಂತ ಪೂಜಾರಿ ಅವರ ಪತ್ನಿ ದಿವ್ಯ ದೂರುದಾರರು. ಫೆ. 28ರಂದು ಗಂಡನೊಂದಿಗೆ ಸ್ಕೂಟರ್‌ನಲ್ಲಿ ಸಂಪಾಜೆಯ ತಾಯಿ ಮನೆಗೆ ತೆರಳಿ ವಾಪಸ್ಸಾಗುವ ವೇಳೆ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದರು. ಲಗೇಜ್ ಬ್ಯಾಗ್‌ನಲ್ಲಿದ್ದ ಚಿನ್ನಾಭರಣದ ಪೆಟ್ಟಿಗೆಯನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟು ದೇವಸ್ಥಾನಕ್ಕೆ ಹೋಗಿದ್ದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾದ ಬಳಿಕ ಸ್ಕೂಟರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ತೆಗೆಯುವುದನ್ನು ಮರೆತಿದ್ದಾರೆ. ಫೆ. 29ರಂದು ಬೆಳಿಗ್ಗೆ ಗಂಡ ಶೇವಿಂಗ್ ಕಿಟ್ ತೆಗೆದುಕೊಳ್ಳಲು ಡಿಕ್ಕಿ ತೆರೆದಾಗ ಚಿನ್ನಾಭರಣ ಹಾಗೂ ಶೇವಿಂಗ್ ಕಿಟ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹುಡುಕಾಟ ನಡೆಸಿದ ನಂತರ ಗೆಜ್ಜೆಗಿರಿಗೆ ತೆರಳಿ, ಫೆ. 28ರಂದು ಸ್ಕೂಟರ್ ನಿಲ್ಲಿಸಿದ್ದ ಸ್ಥಳವನ್ನು ಪರಿಶೀಲಿಸಿದಾಗ ಶೇವಿಂಗ್ ಕಿಟ್‌ನಲ್ಲಿದ್ದ ಬಾಚಣಿಗೆ ಅಲ್ಲಿ ಪತ್ತೆಯಾಗಿದೆ. ಡಿಕ್ಕಿಯಲ್ಲಿ ಇಟ್ಟಿದ್ದ ಕರಿಮಣಿ ಸರ ಸೇರಿದಂತೆ ಇತರ ಸರಗಳು ಸೇರಿ ಒಟ್ಟು 50 ಗ್ರಾಂ ತೂಕದ, ಅಂದಾಜು 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ದೂರು ನೀಡಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








