
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯು ಮಧ್ಯಪ್ರಾಚ್ಯ ಸಂಘರ್ಷವಾಗಿ (Middle East conflict) ವಿಸ್ತರಿಸಿದೆ. ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲದೆ ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳ ನಾಶವೂ ಆಗಿದೆ.
ಇರಾನಿನ ಮಾಧ್ಯಮಗಳಲ್ಲಿನ ಹಲವು ವರದಿಗಳು ಕೊಲ್ಲಿಯಲ್ಲಿನ ಅತಿದೊಡ್ಡ ಅಮೆರಿಕನ್ ರಾಡಾರ್ AN/FPS-132 ಅನ್ನು ನಾಶಪಡಿಸಲಾಗಿದೆ (Iran destroys US radar) ಎಂದು ಹೇಳಿಕೊಂಡಿವೆ. ರಾಡಾರ್ 5,000 ಕಿಲೋ ಮೀಟರ್‌ಗಳ ಟ್ರ್ಯಾಕಿಂಗ್ ವ್ಯಾಪ್ತಿಯನ್ನು ಹೊಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಇರಾನಿನ ಅಧಿಕಾರಿಗಳು, ಈ ಸಂಘರ್ಷವು ದೀರ್ಘಕಾಲದವರೆಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
AN/FPS-132 ಮುಂತಾದ ರಾಡಾರ್ ವ್ಯವಸ್ಥೆಗಳು ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗೆ ಅತ್ಯಂತ ಅಗತ್ಯ. ಇವು ಶತ್ರು ದಾಳಿಗಳನ್ನು ಮೊದಲೇ ಪತ್ತೆಹಚ್ಚಲು, ಟ್ರ್ಯಾಕ್ ಮಾಡಲು ಮತ್ತು ತಡೆಗಟ್ಟಲು ಸಹಾಯ ಮಾಡುತ್ತವೆ.
ಅಮೆರಿಕದ ರಾಡಾರ್ ಧ್ವಂಸ:
ವರದಿ ಪ್ರಕಾರ, ಈ ಮುಂಚಿತ ಎಚ್ಚರಿಕೆ ವ್ಯವಸ್ಥೆ (Early warning system) ಅನ್ನು ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯಲ್ಲಿ ಸ್ಥಾಪಿಸಲಾಗಿದೆ. ಇದು ವಿಶೇಷವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಈ ರಾಡಾರ್ ವ್ಯವಸ್ಥೆಯನ್ನು ಅಮೆರಿಕ 2013ರಲ್ಲಿ ಸುಮಾರು 1.1 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪಿಸಿದೆ.
ರಾಡಾರ್ ಸಂಪೂರ್ಣವಾಗಿ ನಾಶವಾಗಿದೆ ಎಂದು ಇಸ್ಲಾಮಿಕ್ ರೆವೊಲ್ಯಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ. AN/FPS-132 ಅನ್ನು ನಿಖರ ಕ್ಷಿಪಣಿ ದಾಳಿಯಲ್ಲಿ ಧ್ವಂಸ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ಇದನ್ನು ಕತಾರ್ ಅಧಿಕಾರಿಗಳೂ ದೃಢೀಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಅಂದರೆ ರಾಡಾರ್ ವ್ಯವಸ್ಥೆಗೆ ಹಾನಿ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಎಷ್ಟರಮಟ್ಟಿಗೆ ಹಾನಿಯುಂಟಾಗಿದೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಈ ಬೆಳವಣಿಗೆ ಅಮೆರಿಕದ ಕಾರ್ಯಾಚರಣೆಗಳಿಗೆ ದೊಡ್ಡ ಮಟ್ಟಿನ ಹೊಡೆತವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಈ ರಾಡಾರ್ ಗಲ್ಫ್ ಪ್ರದೇಶದ ಬ್ಯಾಲಿಸ್ಟಿಕ್ ಕ್ಷಿಪಣಿ ಪತ್ತೆ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯ ಪ್ರಮುಖ ಭಾಗ. ಇದರ ಮೇಲಾದ ಹಾನಿಯಿಂದ ಗಲ್ಫ್ ಮಿತ್ರ ರಾಷ್ಟ್ರಗಳನ್ನು ರಕ್ಷಿಸುವ ವಾಯು ರಕ್ಷಣಾ ವ್ಯವಸ್ಥೆಯಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ವ್ಯವಸ್ಥೆಯನ್ನು ವಿಶೇಷವಾಗಿ ಇರಾನ್ ಕ್ಷಿಪಣಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿತ್ತು.
ಇರಾನ್ ದಾಳಿಗೆ ಮುನ್ನ, ಕಾರ್ಯಾಚರಣೆಗೆ ಅಮೆರಿಕವು ಎಪಿಕ್ ಫ್ಯೂರಿ ಎಂಬ ಹೆಸರು ನೀಡಿದ್ದು, ತನ್ನ ಅತಿ ದೊಡ್ಡ ಸೇನಾ ಶಕ್ತಿ ಆರ್ಮಡಾವನ್ನು ಸಜ್ಜುಗೊಳಿಸಿತು. ಇದರಲ್ಲಿ ಅತ್ಯಾಧುನಿಕ ಹಾಗೂ ಶಕ್ತಿಶಾಲಿ ಆಯುಧಗಳನ್ನೂ ನಿಯೋಜಿಸಲಾಯಿತು. ಇವುಗಳಲ್ಲಿ B2 ಬಾಂಬರ್‌ಗಳು, ಬ್ಯಾಟ್-ವಿಂಗ್ಡ್ ಸ್ಟೆಲ್ತ್ ಬಾಂಬರ್‌ಗಳು ಪ್ರಮುಖವಾದವು. ಪ್ರತಿ ಫೈಟರ್ ಜೆಟ್ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಬೆಲೆಯವು.








