ಪುತ್ತೂರು: ನಗರದ ಆಕಾಶದಲ್ಲಿ ಮಂಗಳವಾರ ಜೆಟ್ ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಲವು ಸುತ್ತು ಹಾಕಿ ಹಾರಾಡಿದ್ದು, ನಾಗರಿಕರಲ್ಲಿ ಕುತೂಹಲಕ್ಕೆ ಕಾರಣವಾಯಿತು. ಪುತ್ತೂರು ನಗರ ಭಾಗದ ಮೇಲೆ ತುಂಬಾ ಹತ್ತಿರದಿಂದ ವಿಮಾನ ಸಂಚರಿಸಿದ ದೃಶ್ಯ ಕಂಡು ಬಂದಿತು.
ಈ ಬಗ್ಗೆ ತಿಳಿದುಬಂದಂತೆ,

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Geological Survey of India – GSI) ಸಂಸ್ಥೆಯ ಸಮೀಕ್ಷಾ ಕಾರ್ಯಕ್ಕಾಗಿ ಈ ವಿಮಾನ ಹಾರಾಟ ನಡೆಸಿದೆ. ಗಣಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಪ್ರಮುಖ ಭೂ ವಿಜ್ಞಾನ ಸಂಸ್ಥೆ ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಯೋಜನೆಗಳು ಮತ್ತು ಪರಿಸರ ಸುಸ್ಥಿರತೆಗೆ ಅಗತ್ಯವಾದ ಮೂಲಭೂತ ಭೂವೈಜ್ಞಾನಿಕ ಮಾಹಿತಿ ಸಂಗ್ರಹಣೆ, ನಕ್ಷೆ ನಿರ್ಮಾಣ ಹಾಗೂ ಖನಿಜ ಸಂಪನ್ಮೂಲ ಮೌಲ್ಯಮಾಪನ ಕಾರ್ಯಗಳನ್ನು ಕೈಗೊಳ್ಳುತ್ತದೆ.
ಭೂಗರ್ಭದ ರಚನೆ, ಖನಿಜ ಸಂಪತ್ತು ಮತ್ತು ಭೂವೈಜ್ಞಾನಿಕ ಲಕ್ಷಣಗಳ ಅಧ್ಯಯನಕ್ಕಾಗಿ ವಿಶೇಷ ಸಾಧನಗಳೊಂದಿಗೆ ಸಮೀಕ್ಷಾ ಹಾರಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಮಾನವು ನಗರ ಭಾಗದ ಮೇಲೆ ಹಲವು ಬಾರಿ ಸುತ್ತು ಹಾಕಿದ ಕಾರಣ, ಸ್ಥಳೀಯರು ಮನೆಗಳ ಹೊರಗೆ ಬಂದು ಕುತೂಹಲದಿಂದ ಆಕಾಶದತ್ತ ಗಮನ ಹರಿಸಿದರು.
ಈ ಹಾರಾಟ ನಿಯಮಿತ ಸಮೀಕ್ಷಾ ಕಾರ್ಯಾಚರಣೆಯ ಭಾಗವಾಗಿದ್ದು, ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸಂಬಂಧಿತ ಮೂಲಗಳು ಸ್ಪಷ್ಟಪಡಿಸಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!