
ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 118/24 (ಕಲಂ 121(1), 132, 262 – ಭಾರತೀಯ ನ್ಯಾಯ ಸಂಹಿತೆ) ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಪ್ರಕರಣದ ತನಿಖೆಯನ್ನು ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ರಾಘವನ್ @ ಕೋಳಿಕರಣ್ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆಯ ಅಂತ್ಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರು ಆರೋಪಿಗೆ ಕೆಳಕಂಡಂತೆ ಶಿಕ್ಷೆ ವಿಧಿಸಿದರು:
ಕಲಂ 121(1) ಅಡಿ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ. 10,000 ದಂಡ. ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ.
ಕಲಂ 132 ಅಡಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ ನಡೆಸಿದ ಪ್ರಕರಣದಲ್ಲಿ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ. 10,000 ದಂಡ. ದಂಡ ಪಾವತಿಸದಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ.
ಕಲಂ 262 ಅಡಿ ಕಾನೂನುಬದ್ಧ ವಶಕ್ಕೆ ಪಡೆಯುವ ವೇಳೆ ತಡೆ ಉಂಟುಮಾಡಿದ ಪ್ರಕರಣದಲ್ಲಿ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ. 10,000 ದಂಡ. ದಂಡ ಪಾವತಿಸದಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕುಮಾರಿ ಪ್ರೀತಿ ಎಂ.ಸಿ. ಅವರು ಸಮರ್ಥವಾಗಿ ವಾದ ಮಂಡಿಸಿದರು.








