
ಉಡುಪಿ: ಸ್ಥಳೀಯ ಬಿಜೆಪಿ ಮುಖಂಡ ಮಂಜು ಕೊಳ ಎಂಬುವವರಿಗೆ ಚಾಕುವಿನಿಂದ ಇರಿದಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆಯಲ್ಲಿ ನಡೆದಿದೆ ಎಂದು ವರದಿ ಆಗಿದೆ. ಮಂಜು ಕೊಳ ಅವರು ಸ್ಥಳೀಯ ಮೀನುಗಾರರ ಮುಖಂಡ ಆಗಿದ್ದಾರೆ. ಪ್ರೇಮ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆಯಲ್ಲಿ ಕಿಡಿಗೇಡಿಗಳು ಚಾಕು ಇರಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮಲ್ಪೆ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಯುವತಿಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿ ನಡೆದಿತ್ತು. ಮಾತುಕತೆಗೆ ಸಮಯದಲ್ಲಿ ಬಂದಿದ್ದ ಯುವತಿಯ ಕಡೆಯವರು ಬಿಜೆಪಿ ಮುಖಂಡ ಮಂಜು ಕೊಳ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗ್ತಿದೆ.
ಈ ಚಾಕು ಇರಿತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸಹಿತ ಐವರನ್ನ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಭಂಡಾರಿ, ಪ್ರಜ್ಞೇಶ್, ಪುನೀತ್ ಪೂಜಾರಿ, ಅಭಿಜಿತ್ ಬಂಧಿತ ಆರೋಪಿಗಳಾಗಿದ್ದಾರೆ. ಮಲ್ಪೆ ಬೀಚ್ ಬಳಿ ಹಲ್ಲೆ ನಡೆದಿದ್ದು, ಆರೋಪಿಗಳನ್ನು ಸ್ಥಳೀಯ ನಿವಾಸಿಗಳು ಗುರುತಿಸಿದ್ದಾರೆ.
ಗಾಯಗೊಂಡ ಮಂಜು ಕೊಳ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇರಿದ ಆರೋಪಿಗಳನ್ನು ಸ್ಥಳೀಯರು ಪತ್ತೆ ಹಂಚಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳೆಲ್ಲಾ ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆದಿದೆ. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









