
ಇರಾನ್ ಮೇಲಿನ ದಾಳಿಗಳಿಗೆ ಸಂಬಂಧಿಸಿದ ಅಮೆರಿಕದ ಸೈನಿಕ ಕಾರ್ಯಾಚರಣೆಗಳಿಗೆ ತನ್ನ ನೆಲೆಗಳನ್ನು ಬಳಸಲು ಸ್ಪೇನ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಆ ದೇಶದೊಂದಿಗೆ ಇರುವ ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು aljazeera.com ವರದಿ ಮಾಡಿದೆ.
ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗಿನ ಸಭೆಯ ಬಳಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಅವರು, ಸ್ಪೇನ್ ಭಯಾನಕವಾಗಿದೆ, ಸ್ಪೇನ್ ನ ನಿಲುವು ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ಸ್ಪೇನ್‌ನೊಂದಿಗೆ ಎಲ್ಲಾ ವ್ಯವಹಾರಗಳನ್ನು ಕಡಿತಗೊಳಿಸುವಂತೆ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಸೂಚಿಸಿದ್ದೇನೆ. ನಾವು ಸ್ಪೇನ್‌ನೊಂದಿಗಿನ ಎಲ್ಲಾ ವ್ಯಾಪಾರವನ್ನು ಕಡಿತಗೊಳಿಸಲಿದ್ದೇವೆ. ಸ್ಪೇನ್‌ನೊಂದಿಗೆ ನಾವು ಏನನ್ನೂ ಮಾಡಲು ಬಯಸುವುದಿಲ್ಲ, ಎಂದು ಟ್ರಂಪ್ ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಇಂತಹ ನಿರ್ಧಾರಗಳ ಹಿನ್ನೆಲೆ ಯುನೈಟೆಡ್ ಕಿಂಗ್‌ಡಮ್ ನಿಲುವಿನ ಮೇಲೂ ಅವರು ಅಸಮಾಧಾನ ವ್ಯಕ್ತಪಡಿಸಿ, ಯುರೋಪಿನ ಕೆಲ ರಾಷ್ಟ್ರಗಳು ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಸಮರ್ಪಕ ಬೆಂಬಲ ನೀಡುತ್ತಿಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟರು.









