
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಂಗಳೂರು ವಿಭಾಗಕ್ಕೆ ವಿಶೇಷ ಆನೆ ಕಾರ್ಯಪಡೆ (Elephant Task Force) ರಚಿಸಿ ಆದೇಶ ಹೊರಡಿಸಿದೆ.
ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಹಾಗೂ ಸುಬ್ರಹ್ಮಣ್ಯ ವಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆ ಹಾನಿ ಮತ್ತು ಮಾನವ ಸಾವಿನ ಪ್ರಕರಣಗಳೂ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ ಇತರೆ ಜಿಲ್ಲೆಗಳಿಂದ ಕಾರ್ಯಪಡೆಯನ್ನು ಕರೆಸಿಕೊಳ್ಳಬೇಕಾಗುತ್ತಿರುವುದರಿಂದ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಅರಣ್ಯ ಇಲಾಖೆ ಸರ್ಕಾರದ ಗಮನಕ್ಕೆ ತಂದಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರವು ಎಫ್‌ಇಇ 235 ಎಫ್‌ಡಬ್ಲ್ಯುಎಲ್ 2025, ದಿನಾಂಕ 02.03.2026ರ ಆದೇಶದ ಮೂಲಕ ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸಿದೆ.
ಸಿಬ್ಬಂದಿ ವಿವರ
ಆನೆ ಕಾರ್ಯಪಡೆಯಲ್ಲಿರಲಿರುವ ಸಿಬ್ಬಂದಿ ವಿವರ ಹೀಗಿದೆ:
1 ಉಪ ವಲಯ ಅರಣ್ಯಾಧಿಕಾರಿ
3 ಗಸ್ತು ಅರಣ್ಯ ವಾಲಕರು
25 ಅರಣ್ಯ ಪಾಲಕರು
28 ವಾಹನ ಚಾಲಕರು/ತತ್ಸಮಾನ ಸಿಬ್ಬಂದಿ – ಹೊರಗುತ್ತಿಗೆ ಆಧಾರದ ಮೇಲೆ
ಕೇಂದ್ರ ಮತ್ತು ಕಾರ್ಯವ್ಯಾಪ್ತಿ
ಆನೆ ಕಾರ್ಯಪಡೆಯ ಕೇಂದ್ರ ಸ್ಥಾನ ಸುಳ್ಯವಾಗಿರುತ್ತದೆ. ಈ ತಂಡವು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗದವರ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಲಿದೆ.
ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ನುಗ್ಗಿದ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು, ಸಾರ್ವಜನಿಕರಿಗೆ ಆನೆಗಳ ಚಲನವಲನದ ಕುರಿತು ಮಾಹಿತಿ ನೀಡುವುದು ಮತ್ತು ಜಾಗೃತಿ ಮೂಡಿಸುವುದು ತಂಡದ ಪ್ರಮುಖ ಕರ್ತವ್ಯವಾಗಿರುತ್ತದೆ.
ಪ್ರತಿ ಕಾರ್ಯಪಡೆ ಕೇಂದ್ರದಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) ಸ್ಥಾಪಿಸಿ, ಅದರ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.
ಸೌಲಭ್ಯಗಳು
ಕಾರ್ಯಾಚರಣೆಗೆ ಅಗತ್ಯವಾದ ವಾಕಿ-ಟಾಕಿ, ಬಂದೂಕು, ಪಟಾಕಿ ಸೇರಿದಂತೆ ಇತರೆ ಉಪಕರಣಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಒದಗಿಸಲಿದ್ದಾರೆ. ತಂಡದ ಚುರುಕು ಕಾರ್ಯಾಚರಣೆಗೆ 3 ಜೀಪ್‌ಗಳನ್ನು ನೀಡಲಾಗಿದ್ದು, ಹೆಚ್ಚುವರಿಯಾಗಿ 2 ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ನಿಯೋಜಿಸಲಾಗುತ್ತದೆ.
ಆನೆ ಹಾವಳಿ ನಿಯಂತ್ರಣ ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯ ಪಡೆಯುವಂತೆ ಸೂಚಿಸಲಾಗಿದೆ.








