
ಪುತ್ತೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಸಂಬಂಧ ಆರೋಪಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿರ್ಯಾದಿದಾರರಾದ ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಅವರು ಮಾ. 2ರಂದು ಮಧ್ಯಾಹ್ನ ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಪುತ್ತೂರು ರಿಲಯನ್ಸ್ ಮಾಲ್ ಸಮೀಪ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಯತ್ನಿಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಪಿರ್ಯಾದಿದಾರರು ಹಾಗೂ ಸ್ಥಳದಲ್ಲಿದ್ದ ಇತರರು ಆರೋಪಿತನನ್ನು ಹಿಡಿಯಲು ಮುಂದಾದಾಗ, ಆತನು ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 26/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 3, 25, 27ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ ಪುತ್ತೂರು ನಿವಾಸಿ ಮಹಮ್ಮದ್ ಶಫಿಕ್ (19) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.









