ಬಂಟ್ವಾಳ: ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಪ್ರದೇಶದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ನಲ್ಲಿ ಸುಡುಮದ್ದು ಸ್ಫೋಟಗೊಂಡ ಘಟನೆ ನಡೆದಿದ್ದು, ಈ ಸಂಬಂಧ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಸತೀಶ್‌ ಸುವರ್ಣ (50) ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅವರು ವಿಟ್ಲ ಮುಡ್ನೂರು ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿಯಾಗಿದ್ದಾರೆ.
ಮಾ.6 ರಂದು ಸಂಜೆ ಕಂಬಳಬೆಟ್ಟು ನೂಜಿ ಪ್ರದೇಶದಲ್ಲಿ ಸುಡುಮದ್ದು ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಅವರು ಕಂದಾಯ ನಿರೀಕ್ಷಕ ರವಿ ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿ ಅಬ್ದುಲ್‌ ಗಫೂರ್ ಅಕ್ರಮವಾಗಿ ಶೆಡ್‌ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಂಡಿದ್ದರೆಂಬುದು ತಿಳಿದುಬಂದಿದೆ.
ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿಯಿಂದ ಸಂಗ್ರಹಿಸಿದ್ದ ಸುಡುಮದ್ದುಗಳು ಸ್ಫೋಟಗೊಂಡ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 58/26ರಂತೆ Explosives Act 1884 ರ 9B ಹಾಗೂ BNS 288 ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಆರೋಪಿತ ಅಬ್ದುಲ್‌ ಗಫೂರ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!