ಮಂಗಳೂರು, ಮಾ.17: ಭೂ ವ್ಯವಹಾರದಲ್ಲಿ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ಯುವಕನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಹಮ್ಮದ್ ಶರೀಫ್ (26), ತಂದೆ ಇಕ್ಬಾಲ್ , ಪನ್ನೀರ್, ಮಂಗಳೂರು ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಹಾಗೂ ಆರೋಪಿತ ಮಹಮ್ಮದ್ ಶರೀಫ್ ಮತ್ತು ಆತನ ತಂದೆಯ ನಡುವೆ ಭೂ ವ್ಯವಹಾರ ಸಂಬಂಧವಾಗಿ ವಿವಾದವಿತ್ತು. ಸುರತ್ಕಲ್ ಖಾನಾ ಹಾಗೂ ವಾವಂಜೂರು ಪ್ರದೇಶಗಳಲ್ಲಿ ಸುಮಾರು ₹2 ಕೋಟಿ ಹೂಡಿಕೆ ಮಾಡಿದ ವಿಚಾರದಲ್ಲಿ ಮೋಸವಾಗಿದೆ ಎಂಬ ಅನುಮಾನದಿಂದ ಆರೋಪಿತನು ದ್ವೇಷ ಹೊಂದಿದ್ದ ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆರ್ಯ ಸಮಾಜ ರಸ್ತೆ ಬದಿಯಲ್ಲಿ ಮಾತುಕತೆ ನಡೆಸಿದ ವೇಳೆ ಆರೋಪಿತನು ಪಿರ್ಯಾದಿದಾರರ ಮೊಬೈಲ್ ಕಸಿದುಕೊಂಡಿದ್ದಾನೆ. ಬಳಿಕ ಪಿರ್ಯಾದಿದಾರರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಆರೋಪಿತನು ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 33/2026ರಡಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 109, 281, 352, 351, 304(2) ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!