ಬೆಳ್ತಂಗಡಿ: ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ 17 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಜಾತ್ರಾ ಸ್ಥಳದಲ್ಲಿ ಹಲ್ಲೆ ನಡೆಸಿ, ಅವಮಾನಿಸಿ, ಬಲವಂತವಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಾಲಕನು ಮಾರ್ಚ್ 11ರಂದು ಸಂಜೆ ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದಾನೆ. ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯಧರ್ಮದ ಬಾಲಕ ಬಂದಿದ್ದಾನೆ ಎಂದು ಅಕ್ಷೇಪಿಸಿ, ಬಾಲಕನಿಗೆ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಬೈಕ್‌ನಲ್ಲಿ ಬೇರೆ ಸ್ಥಳಕ್ಕೆ ಕರೆದೊಯ್ದು ಮತ್ತೆ ಹಲ್ಲೆ ನಡೆಸಿ, ಜಾತ್ರಾ ಸ್ಥಳದಲ್ಲಿ ತಾನೇ ತಪ್ಪು ಮಾಡಿಕೊಂಡಿದ್ದೇನೆ ಎಂಬುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಕಳುಹಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಬಾಲಕನು ಭಯಭೀತನಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಾಲಕನ ತಂದೆ ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 30/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 137(2), 115(2), 351(2), 352, 353(2) ಮತ್ತು 190ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.














