ಪುತ್ತೂರು, ಮಾ. 19: ಇಲ್ಲಿನ ಏಳ್ಮುಡಿ ಪ್ರದೇಶದ ರಾಮರಾಜ್ ಡ್ರೆಸ್ ಶಾಪ್ ಮುಂಭಾಗ ಗುರುವಾರ ರಾತ್ರಿ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪುತ್ತೂರಿನಿಂದ ದರ್ಬೆ ಕಡೆಗೆ ತೆರಳುತ್ತಿದ್ದ ಬೈಕ್ (KA 21 EB 6868) ಹಾಗೂ ದರ್ಬೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾ (KA 21 C 0465) ಏಳ್ಮುಡಿ ಸಮೀಪ ಮುಖಾಮುಖಿಯಾಗಿವೆ. ಈ ವೇಳೆ ರಿಕ್ಷಾ ಚಾಲಕ ಆಕಸ್ಮಿಕವಾಗಿ ವಾಹನವನ್ನು ತಪ್ಪು ದಿಕ್ಕಿಗೆ ತಿರುಗಿಸಿದ್ದರಿಂದ ಬೈಕ್ ಸವಾರ ನಿಯಂತ್ರಣ ತಪ್ಪಿ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.














