ಬೆಂಗಳೂರು: ಮಹಿಳೆಯರ ಮೇಲೆ ಮೂಡಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಿ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ಮತ್ತು ನಿರಪೇಕ್ಷ ತನಿಖೆಗಾಗಿ ಸಿಐಡಿಗೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಆರೋಪ ಹೊರಬಂದ ತಕ್ಷಣ ಸಂಬಂಧಿತ ಪೊಲೀಸ್ ಇನ್‌ಸ್ಪೆಕ್ಟರ್‌ರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ವರದಿ ನೀಡುವಂತೆ ಸೂಚನೆ ನೀಡಲಾಗಿದ್ದು, ಇನ್ನಷ್ಟು ವಿಚಾರಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದರು. ತನಿಖೆಯ ನಂತರ ಸತ್ಯಾಂಶ ಬಹಿರಂಗವಾಗಲಿದೆ. ಇನ್ನೂ ಎಷ್ಟು ಮಂದಿ ಸಂತ್ರಸ್ತರು ಇದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬರುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 22/2026ರ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿ ನಡೆಸುವಂತೆ ಆದೇಶಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







