ಮಡಿಕೇರಿ: ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಅರಣ್ಯದ ಆಳ ಪ್ರದೇಶದಲ್ಲಿ ಸ್ಥಳೀಯ ಕುಡಿಯ ಜನಾಂಗದ ಯುವಕರು ನಡೆಸಿದ ಹುಡುಕಾಟದ ವೇಳೆ ಅವರು ಸುರಕ್ಷಿತ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಶರಣ್ಯ ಏಪ್ರಿಲ್ 2ರಂದು ತಡಿಯಂಡಮೋಳ್ ಬೆಟ್ಟ ಹತ್ತುವ ಸಂದರ್ಭದಲ್ಲಿ ದಾರಿ ತಪ್ಪಿ ತಂಡದಿಂದ ಬೇರ್ಪಟ್ಟಿದ್ದರು. ಅದಾದ ಬಳಿಕ ಅವರು ಅರಣ್ಯದಲ್ಲಿ ನಾಪತ್ತೆಯಾಗಿದ್ದರು. ವಿಷಯ ತಿಳಿದ ಕೂಡಲೇ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಹಾಗೂ ಸ್ಥಳೀಯ ಸ್ವಯಂಸೇವಕರು ಸಂಯುಕ್ತವಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ದಟ್ಟ ಮಂಜು ಮತ್ತು ಮಳೆಯ ನಡುವೆಯೂ ತಂಡಗಳು ಹಗಲಿರುಳು ಶ್ರಮಿಸಿದ್ದವು.
ಶೋಧ ಕಾರ್ಯಾಚರಣೆಯಲ್ಲಿ ಡ್ರೋಣ್, ಥರ್ಮಲ್ ಡ್ರೋಣ್ ಹಾಗೂ ಶ್ವಾನ ದಳವನ್ನು ಬಳಸಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಹಾಗೂ ಅರಣ್ಯದ ಹಾದಿಗಳ ಬಗ್ಗೆ ಉತ್ತಮ ಅರಿವು ಹೊಂದಿರುವ ಕುಡಿಯ ಜನಾಂಗದ ಯುವಕರು ಅರಣ್ಯದ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಪರಿಶೀಲನೆ ನಡೆಸಿದ ವೇಳೆ ಶರಣ್ಯ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಸುರಕ್ಷಿತವಾಗಿ ಅರಣ್ಯದಿಂದ ಹೊರಕ್ಕೆ ಕರೆತರಲಾಗಿದೆ.
ಯುವತಿ ಆರೋಗ್ಯವಾಗಿದ್ದು, ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದರು. ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಮಂದಿ ತಂಡದೊಂದಿಗೆ ಬೆಟ್ಟ ಹತ್ತಲು ಆರಂಭಿಸಿದ್ದ ಅವರು, ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಹಿಂದೆ ಉಳಿದಿದ್ದರಿಂದ ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.
ನಾಲ್ಕು ದಿನಗಳ ತೀವ್ರ ಶೋಧದ ಬಳಿಕ ಯುವತಿ ಸುರಕ್ಷಿತವಾಗಿ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ಸಂತಸ ಮೂಡಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!