ಉಡುಪಿ: ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಭೂಸಕ್ರಡಿ ಹಾಲಂಬೇರು ಪ್ರದೇಶದಲ್ಲಿ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತ ಯುವತಿಯನ್ನು ಭಾಗ್ಯಶ್ರೀ ಗಾಣಿಗ (23) ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯಲ್ಲಿ ಮೇಲ್ಮಹಡಿಯ ಕೋಣೆಯ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗುಡ್ಡೆಅಂಗಡಿಯ ಇಂಟರ್‌ಲಾಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಶ್ರೀ ಅವರು ಏಪ್ರಿಲ್ 3ರಂದು ರಾತ್ರಿ 10 ಗಂಟೆ ಸುಮಾರಿಗೆ ಮನೆಯವರೊಂದಿಗೆ ಊಟ ಮುಗಿಸಿ ಮಲಗಲು ತಮ್ಮ ಕೋಣೆಗೆ ತೆರಳಿದ್ದರು. ಸುಮಾರು 10.15ರ ವೇಳೆಗೆ ಅಕ್ಕ ಜಯಶ್ರೀ ಅವರು ಹಾಲು ನೀಡಲು ಕೋಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಅವರನ್ನು ಕೆಳಗಿಳಿಸಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಮೃತರ ಅಕ್ಕ ಜಯಶ್ರೀ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.














