ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಪಿಎಸ್‌ಐ ಅವರು ಪೊಲೀಸ್ ಸಿಬ್ಬಂದಿಗೆ ಬಿಸಿಲಿನಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ವಿಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪಿಎಸ್‌ಐ ನೇತ್ರಾವತಿ ಅವರು ಠಾಣೆಯ ಎಎಸ್‌ಐ ಸೇರಿದಂತೆ ಒಟ್ಟು 12 ಸಿಬ್ಬಂದಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿರು ಬಿಸಿಲಿನಲ್ಲಿ ಬಂದೂಕು ಹೊತ್ತು ನಿಲ್ಲುವಂತೆ ಶಿಕ್ಷೆ ವಿಧಿಸಿರುವುದು ತಿಳಿದುಬಂದಿದೆ.
ತೀವ್ರ ಬಿಸಿಲಿನಲ್ಲಿ ಮೂರು ಗಂಟೆಗಳ ಕಾಲ ನಿಲ್ಲಬೇಕಾದ ಕಾರಣ ಕೆಲ ಪೊಲೀಸ್ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಕುರಿತು ಮಾಹಿತಿ ಪೊಲೀಸ್ ಉನ್ನತಾಧಿಕಾರಿಗಳ ಗಮನಕ್ಕೆ ಬಂದಿದ್ದು, ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಚಿತ್ರದುರ್ಗ ಎಸ್‌ಪಿ ರಂಜಿತ್ ಬಂಡಾರು ಆದೇಶಿಸಿದ್ದಾರೆ.














