ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏ.9ರಿಂದ 12ರವರೆಗೆ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಮಂಗಳವಾರ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, “ಸಮಾಜಸೇವೆ, ವಿಶ್ವಕಲ್ಯಾಣ ಹಾಗೂ ದೇಶದ ಸುಭಿಕ್ಷತೆ ಉದ್ದೇಶಗಳಿಂದ ಉತ್ಸವವನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಪಕ್ಕದ ಕಾಸರಗೋಡು ಜಿಲ್ಲೆಗಳಿಂದ ಸುಮಾರು ಒಂದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ” ಎಂದರು.
ಹೊರೆಕಾಣಿಕೆ ಮೆರವಣಿಗೆ
ಏ.8ರಂದು ಅಪರಾಹ್ನ 3 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಅದಕ್ಕೂ ಮೊದಲು ಈಶ್ವರಮಂಗಲ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಉಗ್ರಾಣ ಮುಹೂರ್ತ ನೆರವೇರಲಿದೆ. ಸಂಜೆ ಪುತ್ತೂರಿನಿಂದ ಹೊರಟ ಮೆರವಣಿಗೆ ಕ್ಷೇತ್ರದಲ್ಲಿ ಸಮರ್ಪಣೆಯಾಗಲಿದೆ.
ರಾಮ–ಹನುಮ ಜ್ಯೋತಿ ಆಗಮನ
ಅಯೋಧ್ಯೆ ಹಾಗೂ ಅಂಜನಾದ್ರಿ ಬೆಟ್ಟದಿಂದ ಬಂದಿರುವ ಶ್ರೀರಾಮ–ಹನುಮ ಜ್ಯೋತಿ ಈಗಾಗಲೇ 60 ಗ್ರಾಮಗಳಲ್ಲಿ ಪರ್ಯಟಿಸಿದ್ದು, ಏ.9ರಂದು ಅಪರಾಹ್ನ 3ಕ್ಕೆ ಕ್ಷೇತ್ರಕ್ಕೆ ಆಗಮಿಸಲಿದೆ. ಭವ್ಯ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಯಾಗಮಂಟಪ ಉದ್ಘಾಟನೆ
ಶ್ರೀರಾಮ ತಾರಕ ಯಜ್ಞಕ್ಕಾಗಿ 10 ಯಜ್ಞಕುಂಡಗಳನ್ನು ನಿರ್ಮಿಸಲಾಗಿದೆ. ಏ.10ರಂದು ಬೆಳಗ್ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗಮಂಟಪ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀರಾಮ ತಾರಕ ಜಪ ಆರಂಭವಾಗಲಿದೆ. ಸುಮಾರು 13 ಸಾವಿರ ಭಕ್ತರು ದಂಪತಿ ಸಹಿತವಾಗಿ ಜಪಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.11ರಂದು ಮಧ್ಯಾಹ್ನ ಪೂರ್ಣಾಹುತಿ ನಡೆಯಲಿದ್ದು, ಕಂಚಿ ಕಾಮಕೋಟಿ ಮಠದ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ನಳಿನ್ ಹೇಳಿದರು.
ಏ.12ರಂದು ಬ್ರಹ್ಮಕಲಶಾಭಿಷೇಕ
ಏ.12ರಂದು ಬೆಳಗ್ಗೆ ಶ್ರೀ ಕೋದಂಡರಾಮ ಹಾಗೂ ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಏಕಕಾಲದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಗಣಪತಿ ಹೋಮ, ಪ್ರತಿಷ್ಠಾ ವಿಧಿಗಳು, ರಂಗಪೂಜೆ ಹಾಗೂ ಉತ್ಸವ ಬಲಿ ಕಾರ್ಯಕ್ರಮಗಳು ಜರುಗಲಿವೆ. ನಾಲ್ಕು ದಿನಗಳ ಉತ್ಸವದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ವೈದಿಕ ವಿಧಿವಿಧಾನ
ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿ ಕುಂಚಾರು ಅವರ ಆಚಾರ್ಯತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಏ.9ರಂದು ಸುದರ್ಶನ ಹವನ, ವಾಸ್ತುಬಲಿ; ಏ.10ರಂದು ಅಷ್ಟೋತ್ತರ ಶತನಾರಿಕೇಳ ಗಣಹವನ; ಏ.11ರಂದು ಅರಣೀಮಥನ, ಅಗ್ನಿ ಸ್ಥಾಪನೆ, ತಾರಕಯಾಗ; ಸಂಜೆ ಬ್ರಹ್ಮಕಲಶಪೂಜೆ ನೆರವೇರಲಿದೆ.
ಸಾಂಸ್ಕೃತಿಕ ವೈಭವ
ಹನುಮಗಿರಿಯಲ್ಲಿ ‘ಲವ’ ವೇದಿಕೆ ಹಾಗೂ ಅಮರಗಿರಿಯಲ್ಲಿ ‘ಕುಶ’ ವೇದಿಕೆ ನಿರ್ಮಿಸಲಾಗಿದೆ. ದಾಸವಾಣಿ, ತಾಳಮದ್ದಳೆ, ಯಕ್ಷಗಾನ, ಭರತನಾಟ್ಯ, ಭಕ್ತಿ ಸಂಗೀತ, ಜನಪದ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಾಲ್ಕು ದಿನ ನಡೆಯಲಿವೆ. ಏ.12ರಂದು ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರಮುಖ ಆಕರ್ಷಣೆಯಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಡಾ. ರವೀಶ್ ಪಡುಮಲೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ. ನಾರಾಯಣ ರೆಂಜ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯಪಾಲರ ಭೇಟಿ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಏ.10ರಂದು ಬೆಳಗ್ಗೆ 11ಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮರುನಿರ್ಮಾಣಗೊಂಡ ಮುಖಮಂಟಪ ಹಾಗೂ ಪವಿತ್ರ ವನವನ್ನು ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ, ಎಡನೀರು, ಒಡಿಯೂರು, ಶೃಂಗೇರಿ ಸೇರಿದಂತೆ ಪ್ರಮುಖ ಮಠಗಳ ಸ್ವಾಮಿಗಳು ಹಾಗೂ ಗಣ್ಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.














