ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯ ಸಮೀಪ ನದಿಯಲ್ಲಿ ಬುಧವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಬೆಂಗರೆ ನಿವಾಸಿ ಮೊಹಿದ್ದೀನ್ ನಾಸಿರ್ (50) ಎಂದು ಗುರುತಿಸಲಾಗಿದೆ. ನದಿಯ ಬದಿಯಲ್ಲಿ ನೀರಿನಲ್ಲಿದ್ದ ಮೃತದೇಹವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಯಾರೋ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೊಬೈಲ್ ವಿಚಾರವಾಗಿ ಕೊಲೆ?
ಇತ್ತೀಚೆಗೆ ಉತ್ತರ ಕರ್ನಾಟಕ ಮೂಲದ ಕೆಲವರು ದಕ್ಕೆ ಪರಿಸರದಲ್ಲಿ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದರು ಎಂಬ ಮಾಹಿತಿ ಸ್ಥಳೀಯರಿಂದ ಲಭಿಸಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಸಂಬಂಧಿತ ವಿಷಯದಿಂದಲೇ ಹತ್ಯೆ ನಡೆದಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.














