ಬಾಗಲಕೋಟೆ: ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಯುವಕ–ಯುವತಿಯಿಬ್ಬರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸಮೀಪದ ಆಸಂಗಿ ಗ್ರಾಮದ ಕಾರ್ತಿಕ ನಾಯಕ (20) ಹಾಗೂ ಬನಹಟ್ಟಿ ಕೆ.ಎಚ್.ಡಿ.ಸಿ. ಕಾಲೊನಿಯ ಪವಿತ್ರಾ ವಂಟಿ (19) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಕಾರ್ತಿಕ ಪವಿತ್ರಾ ಮನೆಗೆ ತೆರಳಿ ಕೆಲವು ವಿಚಾರವಾಗಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾಗಿ ತಿಳಿದುಬಂದಿದೆ. ಬಳಿಕ ಈ ಸಂಬಂಧ ಕಾರ್ತಿಕ ಕುಟುಂಬದವರಿಂದ ಸಂಧಾನದ ಮಾತುಕತೆ ನಡೆದಿರುವುದಾಗಿ ಮಾಹಿತಿ ಲಭಿಸಿದೆ.
ಬುಧವಾರ ಬೆಳಿಗ್ಗೆ ಪವಿತ್ರಾ ಎಂದಿನಂತೆ ಮನೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದ ವೇಳೆ ಫೋನ್ ಕರೆ ಬಂದಿದ್ದು, ನಂತರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಅಡುಗೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಈ ವಿಷಯ ತಿಳಿದ ತಕ್ಷಣ ಕಾರ್ತಿಕ ಕೂಡಾ ಆಸಂಗಿ–ಅಸ್ಕಿ ಗ್ರಾಮದ ಮಧ್ಯದಲ್ಲಿರುವ ಸರಸ್ವತಿ ತೋಟದ ಬಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬನಹಟ್ಟಿ ಪಿಎಸ್‌ಐ ಸಂಜಯ ಧರಿಗೋಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎರಡೂ ಕುಟುಂಬಗಳ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!