ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲಕಸಬ ಗ್ರಾಮದ ಮಾಡ ಪ್ರದೇಶದಲ್ಲಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಭೇದಿಸಿದ್ದಾರೆ.
ಏ.12ರಂದು ಸಂಜೆ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು. ಸ್ಥಳದಲ್ಲಿ ಸುಮಾರು 20ರಿಂದ 25 ಮಂದಿ ಗುಂಪು ಸೇರಿ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು. ಪೊಲೀಸರನ್ನು ಕಂಡ ಕೆಲವರು ಪರಾರಿಯಾದರು.
ಈ ವೇಳೆ ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಹಾಗೂ ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಅವರನ್ನು ಬಂಧಿಸಲಾಯಿತು. ಉಳಿದವರನ್ನು ಬಂಧಿಸಲು ಯತ್ನಿಸಿದಾಗ ಆರೋಪಿಗಳಾದ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜೂಜಾಟಕ್ಕೆ ಬಳಸಿದ ಮೂರು ಕೋಳಿಗಳು, ರೂ.1,000 ನಗದು ಹಾಗೂ ಇತರೆ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 90/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆಯ ಕಲಂ 3, 11 ಹಾಗೂ ಬಿಎನ್‌ಎಸ್ 2023ರ ಕಲಂ 112, 221ರಡಿ ಪ್ರಕರಣ ದಾಖಲಿಸಲಾಗಿದೆ.














