ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅದನ್ನು ಅಧಿಕಾರಕ್ಕೆ ತಂದಿರುವುದನ್ನು ಮರೆತು, ಮುಸ್ಲಿಂ ನಾಯಕರನ್ನ ಪಕ್ಷದಿಂದ ಹೊರಹಾಕುತ್ತಿರುವ ಕ್ರಮ ಸರಿಯಲ್ಲ, ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಅನಿವಾರ್ಯವಲ್ಲ ನಮಗೆ ಬೇರೆ ಆಯ್ಕೆಗಳೂ ಇವೆ.

ಅದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಮೈಸೂರು ಜಿಲ್ಲಾ ಮುಸ್ಲಿಂ ಧರ್ಮಗುರುಗಳು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಧರ್ಮಗುರುಗಳು ಮಾತನಾಡಿದರು.

ಮೌಲಾನ ಝಕಾವುಲ್ಲಾ ಮಾತನಾಡಿ, 85 ಸಾವಿರ ಮುಸ್ಲಿಂ ಮತದಾರರು ಇರುವ ದಾವಣಗೆರೆ ಕ್ಷೇತ್ರದ ಟಿಕೆಟ್ ಕೇಳಿರುವುದು ತಪ್ಪಲ್ಲ. ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಿರುವ ಮುಸಲ್ಮಾನರು ತಮ್ಮ ಹಕ್ಕನ್ನು ಕೇಳಿದ್ದಾರೆ. ಟಿಕೆಟ್ ಕೊಡದಿರುವ ಕಾರಣ ಮತದಾರರು, ಮುಖಂಡರು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಆದರೆ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಮುಸ್ಲಿಂ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯುತ್ತಿರುವ ಕಾಂಗ್ರೆಸ್ ಮುಖಂಡರ ನಡೆ ಸರಿಯಲ್ಲ. ಇದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅಪಮಾನ. ಕೂಡಲೇ ಇದನ್ನು ತಿದ್ದಿಕೊಂಡು ನಸೀರ್ ಅಹಮದ್, ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಮತ್ತೆ ಸ್ಥಾನಮಾನ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿವೃತ್ತ ಡಿವೈಎಸ್‌ಪಿ ಸುಹೇಲ್ ಮಾತನಾಡಿ, ರಾಜ್ಯದಲ್ಲಿ ಶೇ.14 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ದಾವಣಗೆರೆ ಕ್ಷೇತ್ರದಲ್ಲಿಯೇ 85 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಸಹಜವಾಗಿಯೇ ಟಿಕೆಟ್ ಕೇಳಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ಮನವಿಯನ್ನು ಪುರಸ್ಕರಿಸಿ ಟಿಕೆಟ್ ನೀಡಬೇಕಿತ್ತು. ಆದರೆ ಟಿಕೆಟ್ ನೀಡದ ಕಾರಣ ಮುಸಲ್ಮಾನರು ಸಹಜವಾಗಿ ಆಕ್ರೋಶಗೊಂಡಿದ್ದಾರೆ. ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷದಲ್ಲಿ ಪದೇ ಪದೇ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಇತಿಹಾಸವೇ ಇದೆ. ಪ್ರಭಾವಿಗಳ ಮೇಲೆ ಇಲ್ಲದ ಕ್ರಮ ಮುಸ್ಲಿಂ ನಾಯಕರ ಮೇಲೆ ಏಕೆ? ಸಮುದಾಯ ಮೌನವಾಗಿದೆ ಎಂದೇ? ಕೂಡಲೇ ಪಕ್ಷದ ಮುಖಂಡರು ಈಗ ಆಗಿರುವ ಪ್ರಮಾದವನ್ನು ತಿದ್ದುಕೊಂಡು ಮುಸ್ಲಿಂ ನಾಯಕರಿಗೆ ತಮ್ಮ ತಮ್ಮ ಸ್ಥಾನಗಳನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನ ಫಯಾಝ್ ಅಹಮದ್, ಮೌಲಾನ ಅರ್ಷದ್, ಮೌಲಾನ ಝಿಯಾವುಲ್ಲ, ಮುಫ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಮೌಲಾನ ಅಬು ಅಯ್ಯೂಬ್ ಅನ್ಸಾರಿ, ಸೈಯದ್ ಇಬ್ರಾಹಿಂ, ಎನ್.ಎಂ.ಮರ್ಚೆಂಟ್, ಇತರರು ಇದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!