ಇಲ್ಲಿನ ಪವಿತ್ರ ಯಾತ್ರಾಸ್ಥಳವಾದ ಶಬರಿಮಲೆ ಸನ್ನಿಧಾನದ (Shabarimala) ಮೇಲೆ ಇತ್ತೀಚೆಗೆ ಭಾರತೀಯ ಕರಾವಳಿ ಕಾವಲು ಪಡೆಯ (Indian cost Guard) ಹೆಲಿಕಾಪ್ಟರ್ (Helicopter) ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿರುವುದು ಭಕ್ತರಲ್ಲಿ ಮತ್ತು ಆಡಳಿತ ಮಂಡಳಿಯಲ್ಲಿ ಆತಂಕ ಮೂಡಿಸಿದೆ.

ಏ.23 ಮಧ್ಯಾಹ್ನ 11 ಗಂಟೆಯ ಸಮಯದಲ್ಲಿ ‘ಸಿಜಿ 821’ ಹೆಸರಿನ ಹೆಲಿಕಾಪ್ಟರ್ ದೇಗುಲದ ಗರ್ಭಗುಡಿ ಮತ್ತು ಧ್ವಜಸ್ತಂಭಕ್ಕೆ ಅತ್ಯಂತ ಸಮೀಪದಲ್ಲಿ ಹಾರಾಡಿರುವ ದೃಶ್ಯಗಳು ಮುನ್ನೆಲೆಗೆ ಬಂದಿವೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ, ಪ್ರತಿಕೂಲ ಹವಾಮಾನ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಮಾರ್ಗ ಬದಲಾಗಿ ದೇಗುಲದ ಮೇಲೆ ಹಾರಾಟ ನಡೆಸಬೇಕಾಯಿತು ಎಂದು ಕರಾವಳಿ ಕಾವಲು ಪಡೆ ಸ್ಪಷ್ಟನೆ ನೀಡಿದೆ. ಜಿಪಿಎಸ್ ಆಧಾರಿತ ಸಂಚಾರದ ವೇಳೆ ತಾಂತ್ರಿಕ ಅಡಚಣೆ ಉಂಟಾಗಿತ್ತು ಎಂದು ತಿಳಿಸಲಾಗಿದೆ. ಆದರೆ, ಶಬರಿಮಲೆಯು ‘ಅತಿಸೂಕ್ಷ್ಮ ಭದ್ರತಾ ವಲಯ’ ಆಗಿರುವುದರಿಂದ, ಪೂರ್ವಾನುಮತಿ ಇಲ್ಲದೆ ಇಂತಹ ಹಾರಾಟ ನಡೆಸಿರುವುದು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಂಪಾ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಬರಿಮಲೆ ವಿಶೇಷ ಆಯುಕ್ತರು ಈ ಬಗ್ಗೆ ವರದಿ ಕೇಳಿದ್ದು, ಎಡಿಜಿಪಿ ಎಸ್. ಶ್ರೀಜಿತ್ ಅವರಿಗೆ ಘಟನೆಯ ತನಿಖೆ ನಡೆಸಿ ಶೀಘ್ರವಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಮುಖ್ಯವಾಗಿ, ದೇಗುಲದ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಗಮನ ಹರಿಸಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!