ಬೆಂಗಳೂರು, ಏಪ್ರಿಲ್ 24: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕ ಸಂಪರ್ಕಕ್ಕೆ ಒಳಪಡಿಸಿ ಬಳಿಕ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್‌ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್‌ಗೆ ಹೈಕೋರ್ಟ್ ಷರತ್ತಿನ ಮೇರೆಗೆ ಮಧ್ಯಂತರ ರಿಲೀಫ್ ನೀಡಿದೆ.
ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಮುಂದಿನ ಆದೇಶದವರೆಗೆ ಆರೋಪಿಯ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಈ ವೇಳೆ, ಆರೋಪಿಯಿಂದಲೇ ಯುವತಿಗೆ ಮಗುವಾಗಿರುವ ಹಿನ್ನೆಲೆಯಲ್ಲಿ ಮಗು ಮತ್ತು ತಾಯಿಯ ಆರೈಕೆಗೆ ಮಾಸಿಕ ₹75 ಸಾವಿರ ಪಾವತಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. “10 ತಿಂಗಳ ಮಗುವು ಹಾಗೂ ತಾಯಿಯನ್ನು ಅನಾಥವನ್ನಾಗಿಸುವುದು ಸರಿಯಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜೊತೆಗೆ, ಪ್ರಕರಣ ಸಂಬಂಧ ಸಂತ್ರಸ್ತೆ ಮತ್ತು ಸಂಬಂಧಿಕರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ನ್ಯಾಯಾಲಯ ಸೂಚಿಸಿದೆ.
ಆರೋಪಿ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಇಬ್ಬರ ಮಧ್ಯೆ ಏಳು ವರ್ಷಗಳ ಪ್ರೇಮ ಸಂಬಂಧವಿತ್ತು. ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ರಾಜಿ ಸಾಧ್ಯವಾಗಿಲ್ಲ. ರಾಜಕೀಯ ಕಾರಣಗಳಿಂದ ಆರೋಪಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಆರೋಪಿಯಿಂದಲೇ ಮಗುವು ಜನಿಸಿರುವುದರಿಂದ ಮದುವೆಯಾಗುವುದು ಉತ್ತಮ. ತಂದೆಯಾಗಿ ಮಗುವಿನ ಆರೈಕೆ ಮಾಡುವುದು ಅವರ ಕರ್ತವ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಇದಲ್ಲದೆ, ಯುವತಿಗೆ ಜೀವನಾಂಶವಾಗಿ ಮಾಸಿಕ ₹10 ಸಾವಿರ ನೀಡಲು ಸಿದ್ಧರಿರುವುದೇ ಎಂದು ನ್ಯಾಯಾಲಯ ಪ್ರಶ್ನಿಸಿ, ಅಭಿಪ್ರಾಯ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!