ಮಧ್ಯಪ್ರದೇಶದ ಜಬಲ್ಪುರದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಬಾರ್ಗಿ ಡ್ಯಾಮ್‌ನಲ್ಲಿ ನಿನ್ನೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿ 9 ಮಂದಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಬೋಟ್‌ನಲ್ಲಿ ಒಟ್ಟು 30 ಮಂದಿ ಇದ್ದು, ಅವರಲ್ಲಿ 17 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 4 ಮಂದಿ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನೆಯ ಬಳಿಕ 9 ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, ದೆಹಲಿ ಮೂಲದ ತಾಯಿ ತನ್ನ ನಾಲ್ಕು ವರ್ಷದ ಮಗುವನ್ನು ಎದೆಗಪ್ಪಿಕೊಂಡೇ ಇಬ್ಬರೂ ಶವವಾಗಿ ಪತ್ತೆಯಾಗಿರುವುದು ಮನಕಲುಕುವ ದೃಶ್ಯವಾಗಿದೆ. ಮಗುವನ್ನು ಉಳಿಸಲು ಮಾಡಿದ ತಾಯಿಯ ಅಂತಿಮ ಪ್ರಯತ್ನ ವಿಫಲವಾಗಿರುವುದು ಎಲ್ಲರ ಮನಸ್ಸನ್ನೇ ನಡುಗಿಸಿದೆ.
ಸದ್ಯ ತಾಯಿ-ಮಗು ಒಂದೇ ಲೈಫ್ ಜಾಕೆಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರು ಈ ಚಿತ್ರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು, “ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಕಂಬನಿ ಮಿಡಿದಿದ್ದಾರೆ.
ಲೈಫ್ ಜಾಕೆಟ್ ಇದ್ದರೂ ಸಾವಿಗೆ ಕಾರಣ ಏನು ಎಂಬ ಪ್ರಶ್ನೆಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬೋಟ್ ಆಕಸ್ಮಿಕವಾಗಿ ಮಗುಚಿದ ವೇಳೆ ತಾಯಿ ಮಗುವನ್ನು ರಕ್ಷಿಸಲು ಯತ್ನಿಸಿದಾಗ, ಇಬ್ಬರೂ ಬೋಟ್‌ನ ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದಾರೆ. ಕ್ಯಾಬಿನ್ ಬಾಗಿಲು ತೆರೆಯದ ಕಾರಣ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ. ನೀರಿನ ಮೇಲ್ಮೈಗೆ ಬಂದಿದ್ದರೆ ಲೈಫ್ ಜಾಕೆಟ್ ನೆರವಿನಿಂದ ಬದುಕುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ಈ ಘಟನೆಯ ಫೋಟೊ ಹಾಗೂ ವಿವರಗಳನ್ನು ಎಬಿಪಿ, ಹಿಂದೂಸ್ತಾನ್ ಟೈಮ್ಸ್, ಎನ್‌ಡಿಟಿವಿ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ದುರಂತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಸೆರೆಹಿಡಿದ ಚಿತ್ರವೇ ಇದಾಗಿದೆ ಎಂದು ಖಚಿತಪಡಿಸಿವೆ.
ಸ್ಥಳೀಯ ಹಬ್ಬದ ಹಿನ್ನೆಲೆ ದೆಹಲಿಯಿಂದ ಬಂದ ಪ್ರವಾಸಿಗರು ಬೋಟ್ ಪ್ರವಾಸ ಕೈಗೊಂಡಿದ್ದರು. ಮೃತರಲ್ಲಿ ದೆಹಲಿ ಹಾಗೂ ಜಬಲ್ಪುರ ಮೂಲದವರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ದುರಂತದ ಕುರಿತು ಸಮಗ್ರ ತನಿಖೆ ನಡೆಸಿ, ಕಾರಣಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.














