ಪುತ್ತೂರು: ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಪರ್ಕ ರಸ್ತೆಯಿಂದ ಅನ್ನಪೂರ್ಣೇಶ್ವರಿ ಭಜನಾ ಮಂದಿರದವರೆಗೆ ಇರುವ ಪ್ರದೇಶದಲ್ಲಿ ನಗರಸಭೆ ವತಿಯಿಂದ ಚರಂಡಿ ಸ್ವಚ್ಛತಾ ಕಾರ್ಯ ಹಾಗೂ ರಸ್ತೆಗೆ ಅಡ್ಡಿಯಾಗಿದ್ದ ಮರದ ರಂಬೆ-ಕೊಂಬೆಗಳು ಮತ್ತು ಪೊದೆಗಳನ್ನು ತೆರವುಗೊಳಿಸಲಾಯಿತು.
ಲೋಕೇಶ್ ಗೌಡ ಪಡ್ಡಾಯೂರು ಅವರ ಮುತುವರ್ಜಿ ಯಿಂದ ನಡೆದ ಈ ಕಾರ್ಯದಲ್ಲಿ, ಭಜನಾ ಮಂದಿರದ ಸಮೀಪ ಕಳೆದ ಸುಮಾರು 20 ವರ್ಷಗಳಿಂದ ರಸ್ತೆಯನ್ನೇ ಮುಚ್ಚುವ ರೀತಿಯಲ್ಲಿ ಬೆಳೆದಿದ್ದ ಪೊದೆಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ, ಚರಂಡಿಗಳಲ್ಲಿ ಪ್ಲಾಸ್ಟಿಕ್, ಕಸ ಹಾಗೂ ಹೂಳು ತುಂಬಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆಯೇ ಹರಿಯುವ ಸಮಸ್ಯೆ ಉಂಟಾಗಿತ್ತು.
ಈ ಸಮಸ್ಯೆಯನ್ನು ಸ್ಥಳೀಯರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಯಂತ್ರದ ಸಹಾಯದಿಂದ ಚರಂಡಿಗಳಲ್ಲಿದ್ದ ಕಸ ಮತ್ತು ಹೂಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದರಿಂದ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಲೋಕೇಶ್ ಗೌಡ ಪಡ್ಡಾಯೂರು ಅವರಿಗೆ ಸ್ಥಳೀಯರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ಪಡ್ಡಾಯೂರು, ಹರೀಶ್ ಬಂಗೇರ, ದಿನೇಶ್ ನೆಲಪಾಲ್, ಯತೀಶ್ ನೆಲಪಾಲ್, ತೇಜಸ್ ಪಡ್ಡಾಯೂರು, ಪ್ರದೀಪ್ ಪಡ್ಡಾಯೂರು,ಆಕಾಶ್ ಪಡ್ಡಾಯೂರು, ರಾಜ ಪಡ್ಡಾಯೂರು, ಪ್ರಮೋದ್ ಪಡ್ಡಾಯೂರು, ವಿಜಯ ನೆಲಪಾಲ್ ಹಾಗೂ ವಿಶ್ವ ಪಡ್ಡಾಯೂರು ಸೇರಿದಂತೆ ಟೀಮ್ ಲೋಕೇಶ್ ಪಡ್ಡಾಯೂರು ಸದಸ್ಯರು ಉಪಸ್ಥಿತರಿದ್ದರು.














