ಬೈಂದೂರು ತಾಲ್ಲೂಕಿನ ಕೊಲ್ಲೂರು ಹೊರವಲಯದ ದಳಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಜೀಪ್ ಹಾಗೂ ಇನ್ಸುಲೇಟರ್ ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮಹಿಳೆಯರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ.
ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಂ ಮೂಲದ ಜ್ಯೋತಿ (45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಆರ್ಯ ಅನೂಪ್ (28) ಎನ್ನುವ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ನಾಲ್ವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹಾಗೂ ನಾಲ್ವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ:ಕೊಲ್ಲೂರು ಕ್ಷೇತ್ರದ ದರ್ಶನ ಹಾಗೂ ಕೊಡಚಾದ್ರಿ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು, ಭಾನುವಾರ ಸ್ಥಳೀಯ ಜಯಪ್ರಕಾಶ್ ಶೆಟ್ಟಿ ಎಂಬುವವರ ಜೀಪ್‌ನಲ್ಲಿ ಕೊಡಚಾದ್ರಿಗೆ ತೆರಳಿ ಹಿಂದಿರುಗುತ್ತಿದ್ದರು. ದಳಿ ಎಂಬಲ್ಲಿ ಇವರ ಜೀಪ್ ಹಾಗೂ ಎದುರಿನಿಂದ ಬಂದ ಮೀನು ತುಂಬಿದ ಇನ್ಸುಲೇಟರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ದೇವರಾಜ್ ಎಂಬುವರು ಚಲಾಯಿಸುತ್ತಿದ್ದರು.
ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೊಲ್ಲೂರು ಪರಿಸರದ ಜೀಪ್ ಚಾಲಕರು ಹಾಗೂ ಸ್ಥಳೀಯರು ಪೊಲೀಸರೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದಾದರು. ಗಾಯಾಳುಗಳನ್ನು ತಮ್ಮ ವಾಹನದಲ್ಲಿಯೆ ಕುಂದಾಪುರ ಆಸ್ಪತ್ರೆಗೆ ಕರೆತಂದಿದ್ದಾರೆ.
ಭಾನುವಾರವಾಗಿದ್ದರಿಂದ ಕೊಲ್ಲೂರಿನ ಸರ್ಕಾರಿ ಆಸ್ಪತ್ರೆ ಮುಚ್ಚಿದ್ದರಿಂದ ಗಾಯಾಳುಗಳಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ದೊರಕಿಲ್ಲ. ಆಂಬುಲೆನ್ಸ್ ಸಹ ತಕ್ಷಣವೇ ದೊರಕದೆ ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಕುಂದಾಪುರಕ್ಕೆ ಕರೆ ತರಬೇಕಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್, ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಭೇಟಿ ನೀಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














