ಕೊಡಗು (ಮೇ 18): ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಭೀಕರ ದುರ್ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ. ಎರಡು ಆನೆಗಳ ನಡುವಿನ ಕಾಳಗಕ್ಕೆ ಬಲಿಯಾದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ (ಜಿನ್ನು) ಅವರ ಸಾವು ಈಗ ಅರಣ್ಯ ಇಲಾಖೆಯ ಹತ್ತಾರು ಲೋಪದೋಷಗಳನ್ನು ಎತ್ತಿ ತೋರಿಸುತ್ತಿದೆ. ಈ ನಡುವೆ, ಪತ್ನಿಯನ್ನು ಕಳೆದುಕೊಂಡ ನೋವಿನಲ್ಲೂ ಪತಿ ಜೋಯೆಲ್ ಅವರು ಪತ್ನಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದುರಂತದ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ ಪತಿ ಜೋಯೆಲ್, ‘ನನ್ನ ಪತ್ನಿಯನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆನೆಯ ತುಳಿತಕ್ಕೆ ಆಕೆಯ ದೇಹ ನಜ್ಜುಗುಜ್ಜಾಗಿದೆ. ಹೀಗಾಗಿ ಎಲ್ಲ ಅಂಗಾಂಗಗಳನ್ನು ದಾನ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಕನಿಷ್ಠ ಆಕೆಯ ಕಣ್ಣುಗಳನ್ನಾದರೂ ದಾನ ಮಾಡುತ್ತೇನೆ. ಆಕೆ ಬೇರೆಯವರ ಕಣ್ಣಿನ ಮೂಲಕ ಈ ಪ್ರಪಂಚವನ್ನು ನೋಡುತ್ತಾ ಬದುಕಿರಲಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ದುಬಾರೆಯಲ್ಲಿ ಪ್ರವಾಸಿಗರಿಗೆ ಕನಿಷ್ಠ ಸುರಕ್ಷತೆಯೂ ಇಲ್ಲ ಎಂದು ಜೋಯೆಲ್ ದೂರಿದ್ದಾರೆ. ‘ನನ್ನ ಪತ್ನಿ ಆನೆಗಳ ಕಾಳಗದ ನಡುವೆ ಸಿಲುಕಿ ಕೆಳಗೆ ಬಿದ್ದಾಗ ರಕ್ಷಿಸಲು ಯಾರೂ ಬರಲಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ಇಲಾಖೆಯ ಬೇಜವಾಬ್ದಾರಿಯೇ ನನ್ನ ಪತ್ನಿಯ ಸಾವಿಗೆ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಘಟನೆಯ ಬಗ್ಗೆ ಮಡಿಕೇರಿ ಡಿಎಫ್‌ಓ (DFO) ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯವಾಗಿ ‘ಮಕ್ನಾ’ (ದಂತವಿಲ್ಲದ ಗಂಡಾನೆ) ಆನೆಗಳನ್ನು ನೋಡಿದಾಗ ಕೆಲವು ಆನೆಗಳು ವಿಪರೀತ ರೋಷಗೊಳ್ಳುತ್ತವೆ. ಇಲ್ಲಿಯೂ ಅದೇ ಆಗಿದೆ. ಮಕ್ನಾ ಆನೆಯನ್ನು ಕಂಡಿದ್ದರಿಂದ ಕಂಜನ್ ಆನೆ ಆಕ್ರೋಶಗೊಂಡಿದೆ.

ಮಾವುತರು ಎಷ್ಟೇ ಪ್ರಯತ್ನಿಸಿದರೂ ಕಂಜನ್ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮೃತ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!