ಪುತ್ತೂರು : ತಹಶೀಲ್ದಾರ್ ಕಚೇರಿ, ಭೂ ದಾಖಲೆ, RTC ತಿದ್ದುಪಡಿ, 94C/94CC ಹಕ್ಕುಪತ್ರ, ಪಿಂಚಣಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳಿಗಾಗಿ ಸಾರ್ವಜನಿಕರು ಬಂಟ್ವಾಳ ಅಥವಾ ಪುತ್ತೂರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದರಿಂದ ವಿಟ್ಲವನ್ನು ನೂತನ ತಾಲೂಕಾಗಿ ಘೋಷಿಸಬೇಕು ಎಂದು SDPI ಆಗ್ರಹಿಸಿದೆ.
ತಾಲೂಕು ಕೇಂದ್ರ ದೂರವಾಗಿರುವ ಕಾರಣ ರೈತರು, ಹಿರಿಯ ನಾಗರಿಕರು ಹಾಗೂ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ತಾಲೂಕು ರಚನೆಯಾದರೆ ಬೆಳೆ ವಿಮೆ, ಕೃಷಿ ಸಬ್ಸಿಡಿ ಮತ್ತು ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಸೇವೆಗಳು ವೇಗವಾಗಿ ದೊರೆಯಲಿವೆ ಎಂದು ನಾಯಕರು ತಿಳಿಸಿದ್ದಾರೆ.
ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ತಾಲೂಕು ಕಚೇರಿ, ಮಿನಿ ವಿಧಾನಸೌಧ, ತಾಲೂಕು ಪಂಚಾಯತ್, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ ವಿಸ್ತರಣೆ ಹಾಗೂ ನ್ಯಾಯಾಲಯ ಶಾಖೆ ಸೇರಿದಂತೆ ಅಗತ್ಯ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ‘ಹೊಸ ಪುತ್ತೂರು ಜಿಲ್ಲೆ’ ರಚನೆಗೂ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಮತ್ತು ರೈತರನ್ನು ಒಗ್ಗೂಡಿಸಿ ಹೋರಾಟ ನಡೆಸುವುದಾಗಿ SDPI ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ಉಸ್ಮಾನ್ ಹಾಗೂ ವಿಟ್ಲ ಬ್ಲಾಕ್ ಕಾರ್ಯದರ್ಶಿ ರಹೀಮ್ ಉಪಸ್ಥಿತರಿದ್ದರು.














