ಮಂಗಳೂರು: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಹಾಸನ ಮೂಲದ ಕೃಷಿಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಕೂಳೂರು ಸೇತುವೆ ಬಳಿ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಸಮೀಪದ ಹಳ್ಳಿಯ ನಿವಾಸಿಯಾಗಿರುವ ಕೃಷಿಕನೊಬ್ಬ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ಮನೆಯಿಂದ ಯಾರಿಗೂ ತಿಳಿಸದೆ ಹೊರಟಿದ್ದ. ಮೊಬೈಲ್ ಫೋನ್ ಮಾತ್ರ ಆನ್‌ನಲ್ಲಿಟ್ಟುಕೊಂಡಿದ್ದ ಆತ, ಮನೆಯವರು ಹಾಗೂ ಸಂಬಂಧಿಕರು ಮನೆಗೆ ಮರಳುವಂತೆ ಮನವಿ ಮಾಡಿದರೂ ತನ್ನಿರುವ ಸ್ಥಳ ತಿಳಿಸದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಸಂಜೆ ಸುಮಾರು 5.30ಕ್ಕೆ ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ವಿಚಾರವನ್ನು ತಂದು ತಕ್ಷಣ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸ್ ಕಮಿಷನರ್ ಕಚೇರಿಯ ತಾಂತ್ರಿಕ ಘಟಕದ ಸಹಕಾರದೊಂದಿಗೆ ವ್ಯಕ್ತಿಯ ಮೊಬೈಲ್ ಸ್ಥಳಾವಳಿ ಪತ್ತೆಹಚ್ಚಲು ಪೊಲೀಸರು ಮುಂದಾದರು. ಈ ನಡುವೆ ಫೋನ್ ಮೂಲಕ ಸಂಪರ್ಕಿಸಿ ಕೌನ್ಸೆಲಿಂಗ್ ನಡೆಸಿದರೂ ಆತ ಸ್ಪಂದಿಸಿರಲಿಲ್ಲ.
ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರ ಶೋಧ ನಡೆಸಿದ ಬಳಿಕ ಸಂಜೆ 7 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ ರಕ್ಷಿಸಿದರು.
ಘಟನೆ ಸ್ಥಳ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದರೂ ಜೀವ ರಕ್ಷಿಸುವ ಉದ್ದೇಶದಿಂದ ತಕ್ಷಣ ಕ್ರಮ ಕೈಗೊಂಡ ಪೊಲೀಸರು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು ಹಾಗೂ ಆಹಾರ ನೀಡಿ ಕೌನ್ಸೆಲಿಂಗ್ ನಡೆಸಿದರು. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಮನವರಿಕೆ ಮಾಡಿದ ಬಳಿಕ ಸಂಬಂಧಿಕರೊಂದಿಗೆ ಅವರನ್ನು ಊರಿಗೆ ಕಳುಹಿಸಿಕೊಡಲಾಯಿತು.
ತಮ್ಮ ಬಂಧುವಿನ ಪ್ರಾಣ ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್‌ಸ್ಪೆಕ್ಟರ್ ಜ್ಞಾನಶೇಖರ್, ಎಎಸ್‌ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.














