

ಉಳ್ಳಾಲ, ಸೆ.13: “ಕಲ್ಜಿಗ” ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಚಿತ್ರದಲ್ಲಿ ಕೊರಗಜ್ಜನ ಕಾರಣಿಕವನ್ನ ತೋರಿಸಲಾಗಿದೆಯೆ ಹೊರತು ದೈವಕ್ಕೆ ಎಲ್ಲೂ ಅಪಚಾರವೆಸಗಿಲ್ಲ. ಚಿತ್ರವನ್ನ ಒಂದು ಬಾರಿಯಾದರೂ ನೋಡದೆ ಅಪ ಪ್ರಚಾರಕ್ಕಿಳಿಯುವುದು ಸರಿಯಲ್ಲ ಎಂದು ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದ್ದಾರೆ.
ಕಲ್ಜಿಗ ಚಿತ್ರದ ಯಶಸ್ಸಿಗಾಗಿ ಕಲ್ಲಾಪು ಬುರ್ದುಗೋಳಿಯ ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಅರ್ಜುನ್ ಕಾಪಿಕಾಡ್ ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಕೃತಿ ರಮಣೀಯ ಬುರ್ದುಗೋಳಿ ಕ್ಷೇತ್ರಕ್ಕೆ ಬಂದು ಧ್ಯಾನಿಸಿದರೆ ಮನಸ್ಸು ಎಷ್ಟೇ ಭಾರವಿದ್ದರೂ ಹಗುರಗೊಳ್ಳುತ್ತದೆ. ತುಳುವನಾಗಿ ಕೊರಗಜ್ಜನ ಭಕ್ತನಾಗಿ ಅದೇ ಕಾರಣೀಕ ದೈವಕ್ಕೆ ಅಪಚಾರ ಎಸಗಲು ಸಾಧ್ಯವೇ..? ಕಲ್ಜಿಗ ಚಿತ್ರದಲ್ಲಿ ಅಜ್ಜನ ಮಹಿಮೆಯನ್ನಷ್ಟೆ ತೋರಿಸುವ ಪ್ರಯತ್ನ ಮಾಡಿದ್ದೇವೆ.
ಈಗಾಗಲೇ ಕಲ್ಜಿಗ ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದಾರೆ. ಚಿತ್ರ ತಂಡದ ಮೇಲೆ ಅಜ್ಜನ ಆಶೀರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಇದುವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ. ಚಿತ್ರದ ಬಗ್ಗೆ ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಅವರು ಒಮ್ಮೆ ಚಿತ್ರ ವೀಕ್ಷಿಸಲಿ. ಬಳಿಕ ಅವರು ಎಲ್ಲಿಗೆ ಕರೆಯುತ್ತಾರೋ ಅಲ್ಲಿಗೆ ಮೊದಲು ನಾನೇ ಚರ್ಚೆಗೆ ಹೋಗಲು ಸಿದ್ಧನಿದ್ದೇನೆ. ಸಿನೆಮಾವನ್ನು ಒಮ್ಮೆಯೂ ನೋಡದೆ, ಸಿನೆಮಾ ವೀಕ್ಷಣೆಯನ್ನ ತಡೆಯುವ ಬಗ್ಗೆ ಮಾತನಾಡೋದು ಸಮಂಜಸವಲ್ಲ. ಇಡೀ ಚಿತ್ರ ತಂಡವೇ ಕೊರಗಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮಗೆ ಇದೆಯೆಂದು ಅರ್ಜುನ್ ಕಾಪಿಕಾಡು ಹೇಳಿದರು.
ಅಜ್ಜನ ಕೃಪೆಯಿಂದಲೇ ಕಾಂತಾರ-2 ರಲ್ಲಿ ಅವಕಾಶ
ಒಂದೂವರೆ ವರ್ಷದ ಹಿಂದೆ ಕಲ್ಜಿಗ ಚಿತ್ರದ ಶೂಟಿಂಗ್ ಆರಂಭವಾದ ಬಳಿಕ ನನಗೆ ಶುಭ ಘಳಿಗೆಯೇ ಆರಂಭವಾಗಿದೆ. ಕೊರಗಜ್ಜನ ಕೃಪಾಕಟಾಕ್ಷದಿಂದ ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ಚಿತ್ರ ಕಾಂತಾರ-2 ರಲ್ಲಿ ಬ್ಯಾಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಸಸಿಹಿತ್ಲಿನ ಕಲ್ಜಿಗ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಯಾವುದೇ ರೀತಿಯ ಅಡಚಣೆಗಳಾಗಿರಲಿಲ್ಲ. ಅಜ್ಜನ ದಯೆಯಿಂದ ದಿನವಿಡೀ ಶೂಟಿಂಗ್ ನಡೆಸಿದರೂ ನಮಗೆ ಸುಸ್ತೇ ಆಗಿರಲಿಲ್ಲ ಎಂದು ಅರ್ಜುನ್ ಕಾಪಿಕಾಡ್ ಹೇಳಿದರು.
ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.