ಪುತ್ತೂರು: ತಾಲೂಕಿನ ಉಪ್ಪಿನಂಗಡಿ, ಕಬಕ, ಪುರುಷರಕಟ್ಟೆ ಹಾಗೂ ಕೊಳ್ತಿಗೆ ಪಟ್ಟಣಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆ ಮೂಲಕ ₹25 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಪಟ್ಟಣಗಳ ಸೌಂದರ್ಯವರ್ಧನೆ, ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣ ಹಾಗೂ ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ಹಂತ ಹಂತವಾಗಿ ಇತರ ಪ್ರದೇಶಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬುಡದಿಂದ ನೇತ್ರಾವತಿ ಸೇತುವೆಯವರೆಗೆ ಮುಖ್ಯ ರಸ್ತೆಯನ್ನು ಚತುಷ್ಪಥಗೊಳಿಸುವ ಉದ್ದೇಶವಿದೆ. ಇದರಿಂದ ಪಟ್ಟಣದ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಸೌಂದರ್ಯವೂ ಹೆಚ್ಚಲಿದೆ ಎಂದು ಅವರು ತಿಳಿಸಿದರು.
ಸುಬ್ರಹ್ಮಣ್ಯ–ಮಂಜೇಶ್ವರ ರಾಜ್ಯ ಹೆದ್ದಾರಿಯ ಮುಕ್ವೆಯಿಂದ ಪುರುಷರಕಟ್ಟೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ನಿಂತಿಕಲ್ಲು–ಅಮ್ಚಿನಡ್ಕ ರಾಜ್ಯ ಹೆದ್ದಾರಿಯ ಕೊಳ್ತಿಗೆ ಪೇಟೆ ಭಾಗದಲ್ಲಿ 100 ಮೀಟರ್ ಚತುಷ್ಪಥ ರಸ್ತೆ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಪುತ್ತೂರು–ವಿಟ್ಲ ರಸ್ತೆಯ ಕಬಕ ಜಂಕ್ಷನ್‌ನಿಂದ ಅಳಿಕೆಮಜಲುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೂ ಅನುದಾನ ಮೀಸಲಿಡಲಾಗಿದೆ.
ಅನುದಾನದ ವಿವರ
ಕೋಡಿಂಬಾಡಿಯಿಂದ ವಿನಾಯಕ ನಗರ ಹಾಗೂ ಉಪ್ಪಿನಂಗಡಿ ಪೇಟೆಯ ಮುಖ್ಯ ರಸ್ತೆಯ ಚತುಷ್ಪಥ ಕಾಮಗಾರಿಗೆ – ₹5.5 ಕೋಟಿ
ಮುಕ್ವೆಯಿಂದ ಪುರುಷರಕಟ್ಟೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ – ₹2 ಕೋಟಿ
ಕೊಳ್ತಿಗೆಯಿಂದ ಸಿದ್ದಮೂಲೆಯವರೆಗೆ ರಸ್ತೆ ಅಗಲೀಕರಣ ಹಾಗೂ ಕೊಳ್ತಿಗೆ ಪೇಟೆಯಲ್ಲಿ 100 ಮೀಟರ್ ಚತುಷ್ಪಥ ಕಾಮಗಾರಿಗೆ – ₹7.5 ಕೋಟಿ
ಕಬಕದಿಂದ ಅಳಿಕೆಮಜಲುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ – ₹10 ಕೋಟಿ
ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಜನರ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!