ಬೆಳ್ತಂಗಡಿ: ತಾಲೂಕಿನ ಪುತ್ತಿಲ–ಬಾರ್ಯ–ತೆಕ್ಕಾರು–ಸರಳಿಕಟ್ಟೆ ಭಾಗದ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸುವಂತೆ ಆಗ್ರಹಿಸಿರುವ ಗ್ರಾಮಸ್ಥರು, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದಿದ್ದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪುತ್ತಿಲದಿಂದ ಸರಳಿಕಟ್ಟೆವರೆಗಿನ ಪ್ರಮುಖ ಸಂಪರ್ಕ ರಸ್ತೆ ಸೇರಿದಂತೆ ಹಲವು ಒಳರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ರಸ್ತೆಯಲ್ಲಿ ದೂಳು ಹೆಚ್ಚಾಗುತ್ತಿದ್ದರೆ, ಮಳೆಗಾಲದಲ್ಲಿ ಕೆಸರು ತುಂಬಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ರಸ್ತೆಗಳ ದುಸ್ಥಿತಿಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ವಾಹನ ಚಾಲನೆಯೂ ಅಪಾಯಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ನೀಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಳಿಕ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಿ ರಸ್ತೆ ಕಾಮಗಾರಿ ಆರಂಭಿಸುವವರೆಗೆ ಮುಂಬರುವ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಆಶ್ವಾಸನೆಗಳ ಬದಲಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.






