ಸುಬ್ರಹ್ಮಣ್ಯ, ಜೂ.13: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ–ಬಿಸ್ಲೆ ರಸ್ತೆಯ ಡಿಪ್ಪೋ ಸಮೀಪ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
KA-13 D 1923 ನೋಂದಣಿ ಸಂಖ್ಯೆಯ ಪಿಕಪ್ ವಾಹನ ಆಯತಪ್ಪಿ ರಸ್ತೆ ಬದಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ ವೇಳೆ, ವಾಹನದ ಚಾಲಕ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಚಂದ್ರು ಅಲಿಯಾಸ್ ಚಂದ್ರಶೇಖರ ಹಾಗೂ ಕ್ಲೀನರ್ ಮೋಹನ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಎರಡು ಜಾನುವಾರುಗಳನ್ನು ಮಾಂಸ ಮಾರಾಟದ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ. ವಾಹನ ಅಪಘಾತಕ್ಕೀಡಾದ ಬಳಿಕ ಜಾನುವಾರುಗಳನ್ನು ಇಳಿಸಿ ಓಡಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದ ಸಮೀಪ ಎರಡು ಜಾನುವಾರುಗಳನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ–2020ರ ವಿವಿಧ ಕಲಂಗಳು, ಪ್ರಾಣಿ ಸಂರಕ್ಷಣಾ ಕಾಯ್ದೆ–1960 ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.







