ತಮ್ಮ ವಿಲಕ್ಷಣ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಪ್ರೊ. ಕೆ.ಎಸ್.ಭಗವಾನ್ ಅವರು ಮತ್ತೊಮ್ಮೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀರಾಮನ ಜನನದ ಕುರಿತು ಅವರು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಈಗ ರಾಜ್ಯಾದ್ಯಂತ ಭಾರಿ ಕಿಡಿ ಹೊತ್ತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಅವರು ಭಗವಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಕೊಡುಗೆ ಏನು?” ಏಕವಚನದಲ್ಲೇ ಉಗ್ರಪ್ಪ ತರಾಟೆ

ಇನ್ನೊಂದೆಡೆ, ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, ಭಗವಾನ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಭಗವಾನ್ ಅವರ ಇತಿಹಾಸ ಪ್ರಜ್ಞೆಯನ್ನು ಪ್ರಶ್ನಿಸಿರುವ ಅವರು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. “ಮಿಸ್ಟರ್ ಭಗವಾನ್, ನಿನಗೆ ರಾಮಾಯಣದ ಬಗ್ಗೆ ಅಸಲಿ ಅರಿವಿದೆಯೇ? ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವನ್ನು ಎಷ್ಟು ಬಾರಿ ಓದಿದ್ದೀಯಾ? ವಯಸ್ಸಿನ ದೋಷವೋ ಅಥವಾ ಬುದ್ಧಿಭ್ರಮಣೆಯೋ ಗೊತ್ತಿಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀಯಾ” ಎಂದು ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ದೇಶಕ್ಕೆ ನಿನ್ನ ಕೊಡುಗೆ ಏನು?

“ನಿನ್ನ ಹೆಸರಿನಲ್ಲೇ ಭಗವಾನ್ ಅಂತ ಇಟ್ಟುಕೊಂಡು ಸನಾತನ ಸಂಸ್ಕೃತಿಯನ್ನು ನಿಂದಿಸುತ್ತಿದ್ದೀಯಾ? ಈ ರಾಜ್ಯಕ್ಕೆ ಮತ್ತು ದೇಶಕ್ಕೆ ನಿನ್ನ ವೈಯಕ್ತಿಕ ಕೊಡುಗೆ ಏನು? ಕೇವಲ ವಿವಾದ ಸೃಷ್ಟಿಸಿ ತಾನೊಬ್ಬ ಮಹಾನ್ ಬುದ್ಧಿಜೀವಿ ಎಂದು ತೋರಿಸಿಕೊಳ್ಳುವ ಹುಚ್ಚುತನ ನಿಲ್ಲಬೇಕು” ಎಂದು ಕಿಡಿಕಾರಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೂ ಕೂಡ ಈ ದೇಶದಲ್ಲಿ ‘ರಾಮರಾಜ್ಯ’ ಬರಬೇಕೆಂದು ಬಯಸಿದ್ದರು. ನೀನು ಗಾಂಧೀಜಿಗಿಂತ ದೊಡ್ಡವನಾ? ಇಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ದೇಶದ ಕೋಟ್ಯಂತರ ಜನರ ನಂಬಿಕೆಗೆ ದ್ರೋಹ ಮಾಡಿರುವ ನೀನು ತಕ್ಷಣವೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ. ಸದ್ಯ ಭಗವಾನ್ ಅವರ ಈ ಹೇಳಿಕೆ ಮತ್ತು ಅದರ ಸುತ್ತ ಎದ್ದಿರುವ ವಿವಾದ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!