ವಿಟ್ಲ, ಜೂ.14: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಉಳ್ಳಾಲ ಬೋಳಿಯಾರ್ ನಿವಾಸಿ ಲತೇಶ್ ಕುಮಾರ್ (37), ಬಂಟ್ವಾಳ ಮಂಚಿ ನಿವಾಸಿ ಸುರೇಶ್ ನಾಯ್ಕ್ ಕೆ. (63) ಹಾಗೂ ವಿಟ್ಲಪಡ್ನೂರು ನಿವಾಸಿ ದಯಾನಂದ (40) ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ ₹1,550 ನಗದು, ಮೂರು ಅಂಕದ ಕೋಳಿಗಳು ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.129/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 87, 93, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಕಲಂ 3, 11 ಹಾಗೂ ಬಿಎನ್‌ಎಸ್ ಕಲಂ 112ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.







