ಧರ್ಮಸ್ಥಳ: ಕುಮಾರಿ ಸೌಜನ್ಯಾ ಪ್ರಕರಣವನ್ನು ಮರುತನಿಖೆಗೆ ಒಪ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಮುಕ್ತಮನಸ್ಸಿನಿಂದ ಸ್ವಾಗತಿಸುವುದಾಗಿ ಕ್ಷೇತ್ರದ ವ್ಯವಸ್ಥಾಪಕ ಶ್ರೀ ಪಾರ್ಶ್ವನಾಥ್ ಜೈನ್ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಳೆದ ಹಲವು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀ ಕ್ಷೇತ್ರದ ವಿರುದ್ಧ ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ ಕಳಂಕ ತರುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.ಕುಮಾರಿ ಸೌಜನ್ಯಾಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯವಾಗಿದೆ. ಇದೀಗ ಆದೇಶಿಸಲಾಗಿರುವ ಮರುತನಿಖೆಯು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ತನಿಖೆಯ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಎಂದು ಆಶಿಸುವುದಾಗಿ ಅವರು ತಿಳಿಸಿದ್ದಾರೆ.










