ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸೆ.23ರೊಳಗೆ ಅರ್ಜಿ ನಮೂನೆ–6 ಸಲ್ಲಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ಗಡುವಿನೊಳಗೆ ಅರ್ಜಿ ಸಲ್ಲಿಸದಿದ್ದರೆ ಎಸ್‌ಐಆರ್‌ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.ಎಸ್‌ಐಆರ್‌ ಆರಂಭದ ವೇಳೆ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಆ.24ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ 4.43 ಕೋಟಿ ಮತದಾರರ ಹೆಸರು ಮಾತ್ರ ಸೇರ್ಪಡೆಯಾಗಿದೆ. ಸುಮಾರು 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಡಿ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.ಈ ಪೈಕಿ ಸುಮಾರು 65 ಲಕ್ಷ ಮತದಾರರನ್ನು ‘ಶಾಶ್ವತ ಸ್ಥಳಾಂತರ’ ಎಂದು ವರ್ಗೀಕರಿಸಲಾಗಿದೆ. ಇವರು ಎಸ್‌ಐಆರ್‌ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಲು ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಅರ್ಜಿ ನಮೂನೆ–6 ಸಲ್ಲಿಸುವುದು ಕಡ್ಡಾಯವಾಗಿದೆ. ಈವರೆಗೆ ಕೇವಲ 6.42 ಲಕ್ಷ ಮಂದಿ ಮಾತ್ರ ನಮೂನೆ–6 ಸಲ್ಲಿಸಿದ್ದಾರೆ.ಸೆ.23ರೊಳಗೆ ಸಲ್ಲಿಸಿದ ಅರ್ಜಿಗಳ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದಲ್ಲಿ ವಿಚಾರಣೆಗೆ ಕರೆದು ಮಾಹಿತಿ ಖಚಿತಪಡಿಸಿಕೊಂಡ ಬಳಿಕ ಅರ್ಹರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಸುಕುಮಾರ್ ತಿಳಿಸಿದ್ದಾರೆ.17.63 ಲಕ್ಷ ನೋಟಿಸ್‌ ವಿಲೇವಾರಿಕರಡು ಪಟ್ಟಿಯಲ್ಲಿ ಹೆಸರು ಇದ್ದರೂ ಮ್ಯಾಪಿಂಗ್ ಆಗದ ಅಥವಾ ವಿವರಗಳಲ್ಲಿ ವ್ಯತ್ಯಾಸವಿರುವ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ 34.96 ಲಕ್ಷ ಮಂದಿಗೆ ನೋಟಿಸ್ ನೀಡಲಾಗಿದ್ದು, 17.63 ಲಕ್ಷ ಪ್ರಕರಣಗಳ ವಿಚಾರಣೆ ನಡೆಸಿ ನೋಟಿಸ್‌ಗಳನ್ನು ವಿಲೇವಾರಿ ಮಾಡಲಾಗಿದೆ.ಹಾಸನ, ಬೆಂಗಳೂರು ದಕ್ಷಿಣ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಶೇ.100ರಷ್ಟು ನೋಟಿಸ್ ವಿತರಿಸಲಾಗಿದೆ. ಇನ್ನೂ 23 ಜಿಲ್ಲೆಗಳಲ್ಲಿ ಶೇ.90ಕ್ಕೂ ಹೆಚ್ಚು ನೋಟಿಸ್ ವಿತರಣೆ ಪೂರ್ಣಗೊಂಡಿದೆ.ಮತದಾರರು ತಮ್ಮ ಹೆಸರು ಕರಡು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ಸೆ.23ರೊಳಗೆ ನಮೂನೆ–6 ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ ಎಂದು ಚುನಾವಣಾಧಿಕಾರಿ ಕಚೇರಿ ಸೂಚಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!