ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದ ಚುನಾವಣಾ ಸಾಕ್ಷರತಾ ಸಂಘ ಹಾಗೂ ಗ್ರಾಹಕ ವೇದಿಕೆಯ ಆಶ್ರಯದಲ್ಲಿ ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಭಿಯಾನ’ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅಧ್ಯಕ್ಷತೆ ವಹಿಸಿ, ಚುನಾವಣೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ಸಂಪನ್ಮೂಲ ವ್ಯಕ್ತಿ, ಭಾರತೀಯ ಚುನಾವಣಾ ಆಯೋಗದ ವಿಧಾನಸಭಾ ಕ್ಷೇತ್ರ ಮಟ್ಟದ ತರಬೇತುದಾರ ಹಾಗೂ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಅವರು ಮತದಾನದ ಹಕ್ಕು, ಮತದಾರರಾಗಲು ಅಗತ್ಯವಿರುವ ಅರ್ಹತೆಗಳು ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡಿದರು.ಪುತ್ತೂರು ಸಹಾಯಕ ತಹಶೀಲ್ದಾರ್ ಸುಲೋಚನ ಅವರು ಮತದಾರರ ಗುರುತಿನ ಚೀಟಿಗಾಗಿ ನೋಂದಣಿ ಮಾಡಿಕೊಳ್ಳುವ ವಿಧಾನ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕ ಧನ್ಯಾ ಪಿ.ಟಿ. ಕಾರ್ಯಕ್ರಮ ನಿರೂಪಿಸಿದರು. ಗ್ರಾಹಕ ವೇದಿಕೆಯ ಸಂಯೋಜಕಿ ಸ್ವಾತಿ ಶೆಟ್ಟಿ ಡಿ. ಸ್ವಾಗತಿಸಿ, ವಂದಿಸಿದರು.










