ಬಿಳಿಯೂರು, ಸೆ.22: ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆ–ಕರ್ವೇಲು ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸರ್ವೀಸ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಬಿ.ಸಿ.ರೋಡ್‌ನಿಂದ ಪೆರಿಯಶಾಂತಿಯವರೆಗಿನ ಸುಮಾರು 63 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭದಲ್ಲಿ ಎಲ್‌ಆ್ಯಂಡ್‌ಟಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಕರ್ವೇಲು ಕೇಂದ್ರ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಬಳಿಕ ಕೆ.ಎನ್.ಆರ್. ಸಂಸ್ಥೆ ಕಾಮಗಾರಿಯನ್ನು ವಹಿಸಿಕೊಂಡಿದ್ದು, ಮೇಲ್ಸೇತುವೆ ಕಾಮಗಾರಿಯನ್ನು ಕೈಬಿಟ್ಟು ಕರ್ವೇಲು ಭಾಗದ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಸರ್ವೀಸ್ ರಸ್ತೆ ಕಾಮಗಾರಿ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದ ಕೈಬಿಡುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದರು. ಬಳಿಕ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆ ಕಾಮಗಾರಿಗಳನ್ನು ಏಕಕಾಲದಲ್ಲಿ ಮುಂದುವರಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.ಆದರೆ, ಸರ್ವೀಸ್ ರಸ್ತೆಗೆ ನೀರಿನ ಹರಿವಿಗೆ ಚರಂಡಿ ವ್ಯವಸ್ಥೆ ಇಲ್ಲದ ಕಾರ್ಟ್ ರಸ್ತೆ ನಿರ್ಮಿಸುವುದಾಗಿ ಹೆದ್ದಾರಿ ಇಂಜಿನಿಯರ್‌ಗಳು ಹಾಗೂ ಕೆ.ಎನ್.ಆರ್. ಸಂಸ್ಥೆಯವರು ನೀಡಿದ ಉತ್ತರದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಸಂಸದರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.ಕೃಷಿ ಭೂಮಿಗೆ ನುಗ್ಗಿದ ಮಳೆನೀರುಹೆದ್ದಾರಿಯ ಎರಡೂ ಬದಿಯ ಅಡಿಕೆ ತೋಟ ಹಾಗೂ ಕೃಷಿ ಪ್ರದೇಶಗಳಿಗೆ ಮಳೆನೀರು, ಕೆಸರು ಮತ್ತು ಮಣ್ಣು ನುಗ್ಗಿರುವುದರಿಂದ ರೈತರಿಗೆ ನಷ್ಟ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘದ ಡಾ. ಬಿ. ಶ್ರೀಧರ ಶೆಟ್ಟಿ ಅವರ ಮನವಿಯ ಮೇರೆಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮತಿ ಎಂಬವರ ತೋಟಕ್ಕೆ ಸುಮಾರು ₹12.60 ಲಕ್ಷ ನಷ್ಟವಾಗಿರುವ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.ನಾರಾಯಣ ಸಾಮಂತ, ಕಲಾವತಿ, ಸಾಮಂತಿ, ಶೋಭಾ ಸಾಮಂತ, ಪದ್ಮನಾಭ ಭಟ್, ಧರ್ಣಪ್ಪ ನಾಯ್ಕ ಹಾಗೂ ಚಂದ್ರಾವತಿ ಸೇರಿದಂತೆ ಹಲವರಿಗೆ ಕೃಷಿ ನಷ್ಟವಾಗಿದ್ದು, ಈ ಕುರಿತು ಮಾನವ ಹಕ್ಕು ಆಯೋಗವು ತೋಟಗಾರಿಕಾ ಇಲಾಖೆಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕಕರ್ವೇಲು–ಶಾಂತಿನಗರ–ಪುತ್ತೂರು ರಸ್ತೆ ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಸುಮಾರು ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಮೂರು ದೇವಸ್ಥಾನಗಳು, ಐದು ಗ್ರಾಮಗಳಿಗೆ ಸಂಬಂಧಿಸಿದ ದೈವಸ್ಥಾನಗಳು, ಎರಡು ಮಸೀದಿಗಳು, ಮದ್ರಸಗಳು, ಶಾಲೆಗಳು, ಮೂರು ಅಂಗನವಾಡಿಗಳು, ಎರಡು ಪ್ರೌಢಶಾಲೆಗಳು ಹಾಗೂ ಭಜನಾ ಮಂದಿರಗಳಿವೆ. 110 ಕೆ.ವಿ. ವಿದ್ಯುತ್ ಉಪಕೇಂದ್ರವೂ ಸಮೀಪದಲ್ಲಿದೆ.ಪುತ್ತೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಿಳಿಯೂರು ಅಣೆಕಟ್ಟಿನ ಸಂಪರ್ಕ ರಸ್ತೆಯೂ ಇದೇ ಮಾರ್ಗದಲ್ಲಿದ್ದು, ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಸರ್ವೀಸ್ ರಸ್ತೆ ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸದಿದ್ದರೆ ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಸಂಸದರು ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ವಿಷಯ ತರಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!