ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ಸೆ. 22ರಂದು ಬೆಳಗ್ಗೆ ಪಡೀಲ್‌ನಲ್ಲಿ ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.ಕಂಕನಾಡಿ ನಗರ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಮಾರ್ನಿಂಗ್ ರೌಂಡ್ಸ್‌ನಲ್ಲಿದ್ದ ವೇಳೆ ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಕಂದು ಬಣ್ಣದ ಈಚರ್ ಲಾರಿಯೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ಲಾರಿಯನ್ನು ಬೆನ್ನಟ್ಟಿ ಪಡೀಲ್ ಟೊಯೋಟಾ ಕಾರ್ ಶೋರೂಂ ಎದುರು ತಡೆದು ಪರಿಶೀಲಿಸಿದರು.ಲಾರಿಯಲ್ಲಿದ್ದ ವ್ಯಕ್ತಿಯೊಬ್ಬ ಪರಾರಿಯಾಗಿದ್ದು, ಚಾಲಕ ಹಾಸನ ಜಿಲ್ಲೆಯ ಸಾಧಿಕ್ ಜಿ. (23) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದರು. ಲಾರಿಯ ಬಾಡಿಯನ್ನು ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಒಳಗೆ 17 ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮವಿಲ್ಲದೆ, ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಕಟ್ಟಿ, ಕತ್ತುಗಳನ್ನು ಮೇಲಕ್ಕೆತ್ತಿ ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.ಜಾನುವಾರುಗಳು, ಲಾರಿ ಹಾಗೂ ಚಾಲಕನ ಮೊಬೈಲ್‌ ಫೋನ್‌ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಪ್ರಕರಣದಲ್ಲಿ ಪರಾರಿಯಾಗಿರುವ ಸುಬಾನ್ ಹಾಗೂ ರೆಹಮಾನ್ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!