ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನದ ವಿಚಾರವು ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಬಿಜೆಪಿ ನಾಯಕರೆಲ್ಲ HIV ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಕಾಂಗ್ರೆಸ್‌ ಸಲಹೆ ನೀಡುವ ಮಟ್ಟಕ್ಕೂ ತಲುಪಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯ ಮಾಡಿದೆ.

ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ ಎಂದು ಕಾಲೆಳೆದಿದೆ.

ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ರಾಜ್ಯ ಬಿಜೆಪಿ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ಸಲಹೆ ಕೂಡ ನೀಡಿದೆ.

ಏನಿದು ಅಸಲಿ ವಿಚಾರ?: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಈಗಾಗಲೇ ಜಾತಿ ನಿಂದನೆ ಕೇಸ್, ಲಂಚ ಪ್ರಕರಣ ದಾಖಲಾಗಿ ಸಂಚಲನ ಸೃಷ್ಟಿಯಾಗಿದೆ. ಇದರೊಂದಿಗೆ ಮತ್ತೊಂದೆಡೆ ರೇಪ್ ಕೇಸ್ ಕೂಡ ದಾಖಲಾಗಿದೆ. ಇನ್ನು ಮುನಿರತ್ನ ಅವರು ಏಡ್ಸ್ ಸೋಂಕಿತರ ರಕ್ತ ಬಳಸಿ ಎದುರಾಳಿಗಳ ಮೇಲೆ ದಾಳಿ ಮಾಡುವ ಆರೋಪವೂ ಕೇಳಿಬಂದಿತ್ತು. ಅದರಲ್ಲೂ ತಮ್ಮದೇ ಪಕ್ಷದ ನಾಯಕರ ಮೇಲೆ ಈ ಪ್ರಯೋಗಕ್ಕೆ ಮುನಿರತ್ನ ಮುಂದಾಗಿದ್ದರು ಎನ್ನಲಾಗಿದೆ.

ಇನ್ನು ವಿಪಕ್ಷ ನಾಯಕ ಸ್ಥಾನದಲ್ಲಿರುವ ಆರ್‌.ಅಶೋಕ್‌ ಅವರನ್ನೂ ಮುನಿರತ್ನ ಟಾರ್ಗೆಟ್ ಮಾಡಿದ್ದರು. ಇವರಿಗೂ ಏಡ್ಸ್ ಸೋಂಕಿತರ ರಕ್ತ ಬಳಸಿ ಎಚ್‌ಐವಿ ಹಬ್ಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ದೊಡ್ಡಮಟ್ಟದಲ್ಲಿ ಕೇಳಿಬಂದಿದೆ.

ಮುನಿರತ್ನ ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದಾಗ ಹಲವರು ಅಡ್ಡಿಯಾಗಿದ್ದರಂತೆ. ಸಚಿವ ಸ್ಥಾನ ಪಡೆಯಲು ಆರ್‌.ಅಶೋಕ್‌ ಅವರಿಂದಲೂ ಅಡ್ಡಿಯಿತ್ತು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಮುನಿರತ್ನ ಅವರು ಅಶೋಕ್‌ ಅವರ ವಿರುದ್ಧ ಈ ರೀತಿ ಸಂಚು ರೂಪಿಸಿದ್ದರು ಎನ್ನುವ ಆರೋಪ ಸದ್ದು ಮಾಡುತ್ತಿದೆ. ಅಶೋಕ್ ಅವರಿಗೆ ಎಚ್‌ಐವಿ ರಕ್ತದ ಇಂಜಕ್ಷನ್ ಚುಚ್ಚಿ, ಏಡ್ಸ್ ರೋಗ ಹಬ್ಬಿಸಲು ಮುನಿರತ್ನ ಕುತಂತ್ರ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಬಂಧ ತನಿಖೆ ಕೂಡ ಶುರುವಾಗಿದೆ.

ಈ ಕುರಿತು ಮಾತನಾಡಿರುವ ಶಾಸಕ ಕುಣಿಗಲ್ ರಂಗನಾಥ್, ಎಚ್‌ಐವಿ ಹರಡಿಸುವ ಮುನಿರತ್ನ ಪ್ರಯತ್ನ ನಿಜಕ್ಕೂ ಆಘಾತಕಾರಿ. ಇದರಲ್ಲಿ ಮುನಿರತ್ನ ಒಬ್ಬರೇ ಇಲ್ಲ, ಸಿ.ಟಿ.ರವಿ, ವಿರೋಧ ಪಕ್ಷದ ನಾಯಕರಾದ ಅಶೋಕ್, ಹೆಚ್‌.ಡಿ.ಕುಮಾರಸ್ವಾಮಿ ಕುಮ್ಮಕ್ಕಿನಿಂದಲೇ ನಡೆದಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ಸೋಂಕಿತರು ಇರುವ ಮಾಹಿತಿ ಇದೆ. ಇದರ‌ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಜಾತಿ ನಿಂದನೆ ಸಂಬಂಧ ಒಕ್ಕಲಿಗ ಹಾಗೂ ದಲಿತ ಶಾಸಕರೆಲ್ಲ ಗವರ್ನರ್ ಅವರನ್ನ ಭೇಟಿ ಮಾಡುತ್ತೇವೆ. ಮುನಿರತ್ನ ಜೊತೆ ಯಾರೆಲ್ಲ ಇದ್ದರೋ ಅವರೆಲ್ಲರೂ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಅವರು ಗೃಹ ಸಚಿವರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!