
ನವದೆಹಲಿ: ಮೀನಿನ ಊಟ ಅಥವಾ ಮೀನು ಫ್ರೈ ಎಂದರೆ ಮಾಂಸದೂಟ ಪ್ರಿಯರಿಗೆ ಬಹಳ ಅಚ್ಚುಮೆಚ್ಚು. ಹಳ್ಳಿಗಳಲ್ಲಿ ಸಿಗುವ ಕೆರೆ, ಹೊಳೆ ಮೀನುಗಳಿಗಿಂತ ಸಮುದ್ರದಲ್ಲಿ ದೊರೆಯುವ ತರಹೇವಾರಿ ಫಿಶ್ಗಳಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಗೋಲ್ಡ್ ವೈರ್, ರವಾ, ಕೊರಿಮೀನು, ಪಾಮ್ಫ್ರೇಟ್ ಹೀಗೆ ಒಂದಷ್ಟು ಮೀನುಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಇದೆ.ಮೀನು ನಾಲಿಗೆಗೆ ಎಷ್ಟು ರುಚಿಕರವೋ ಆರೋಗ್ಯಕ್ಕೂ ಅಷ್ಟೇ ಉತ್ತಮ. ದಿನನಿತ್ಯದ ಆಹಾರದಲ್ಲಿ ಮೀನಿನ ಬಳಕೆ ತಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುವ ದೃಷ್ಟಿಯಿಂದ ಬಹುಜನರು ಫಿಶ್ ಸೇವಿಸುವ ಅಭ್ಯಾಸ ರೂಡಿಸಿಕೊಂಡಿದ್ದಾರೆ.
ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಮೀನಿಗೆ 100ರಿಂದ 500 ರೂ. ಬೆಲೆ ಇದೆ. ಅದು ಯಾವ ಬಗೆಯ ಮೀನು ಎಂಬುದರ ಮೇಲೆ ನಿಂತಿದೆ. ಈ ಪೈಕಿ ದುಬಾರಿ ಮೊತ್ತದ ಮೀನುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರ ರುಚಿಯನ್ನು ನೀವು ಈಗಾಗಲೇ ಸವಿದು ನೋಡಿರುತ್ತೀರಿ. ಆದ್ರೆ, ಬಾಂಗ್ಲಾದೇಶದಲ್ಲಿ ಸಿಗುವ ಈ ಅಪರೂಪದ ಹಾಗೂ ದುಬಾರಿ ಮೊತ್ತದ ಮೀನಿನ ಬಗ್ಗೆ ಕೇಳಿದ್ದೀರಾ? ಇದರ ಹೆಸರು ಹಿಸ್ಲಾ. ಕೆಜಿಗೆ ಇದರ ಬೆಲೆ 1000 ರೂ.ಗೂ ಅಧಿಕವಿದೆ. ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ಲಭ್ಯವಿರುವ ಈ ಮೀನನ್ನು ‘ಪದ್ಮಾ ಪುಲಸ’ ಎಂದು ಅಲ್ಲಿನ ಜನರು ಕರೆಯುತ್ತಾರೆ.
ಈ ಮೀನುಗಳು ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ಕಂಡುಬಂದಿದ್ದು, ಜಗತ್ತಿನ ಶೇ. 70ರಷ್ಟು ಹಿಲ್ಸಾವನ್ನು ಬಾಂಗ್ಲಾದೇಶವೇ ಉತ್ಪಾದಿಸುತ್ತದೆ ಎಂಬುದು ಸದ್ಯ ಅಚ್ಚರಿ ಸಂಗತಿ. ಇದೆಲ್ಲದರ ನಡುವೆ ಇದೀಗ ಹಿಲ್ಸಾ ಮೀನುಗಳನ್ನು ಭಾರತಕ್ಕೆ ರಫ್ತು ಮಾಡಲು ಬಾಂಗ್ಲಾದೇಶ ಸರ್ಕಾರ ಅನುಮೋದನೆ ನೀಡಿರುವುದು ಮತ್ತೊಂದು ಅಚ್ಚರಿ ವಿಷಯ. ಅಸಲಿಗೆ ಇಷ್ಟು ದಿನ ಹಿಲ್ಸಾ ಮೀನನ್ನು ಭಾರತಕ್ಕೆ ರಫ್ತು ಮಾಡುವುದನ್ನು ತಡೆದಿದ್ದ ಬಾಂಗ್ಲಾ, ಅದ್ಯಾಕೆ ದಿಢೀರ್ ಎಂದು ನಿಷೇಧ ತೆಗೆದಿದ್ದು ಎಂಬುದು ಇದೀಗ ಅನೇಕರಲ್ಲಿ ಗೊಂದಲ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ. ಅದೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಹಿಲ್ಸಾ ಮೀನು ರಫ್ತಿನ ಮೇಲಿನ ನಿಷೇಧವನ್ನು ಈಗ ಬಾಂಗ್ಲಾದೇಶ ಸರ್ಕಾರ ತೆಗೆದುಹಾಕಿದೆ. ಶೀಘ್ರದಲ್ಲೇ ಭಾರತಕ್ಕೆ 3 ಸಾವಿರ ಟನ್ ಹಿಲ್ಸಾ ಮೀನು ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿದೆ. 2012ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದದ ಬಗ್ಗೆ ವಿವಾದ ಉಂಟಾಗಿ ಈ ಮೀನಿನ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು. ಅಪರೂಪದ ಮೀನು ಆಗಿರುವುದರಿಂದ ಕಳ್ಳಸಾಗಣೆ ಹೆಚ್ಚಾಯಿತು. ಇದರ ಪರಿಣಾಮವಾಗಿ ಬಾಂಗ್ಲಾದೇಶ ಸರ್ಕಾರ 2022ರಲ್ಲಿ ಬ್ಯಾನ್ ಅನ್ನು ಹಿಂಪಡೆದಿತ್ತು.
ಇತ್ತೀಚೆಗಷ್ಟೇ ಶೇಖ್ ಹಸೀನಾ ಸರ್ಕಾರ ಪತನಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಹಂಗಾಮಿ ಸರ್ಕಾರ ರಚನೆಯಾದ ಬೆನ್ನಲ್ಲೇ ಭಾರತಕ್ಕೆ ಈ ವರ್ಷ ಹಿಲ್ಸಾ ಮೀನಿನ ರಫ್ತು ನಿಷೇಧಿಸಬೇಕು ಎಂದು ನಿರ್ಧರಿಸಲಾಗಿತ್ತು. ಆದ್ರೆ, ಈಗ ನಿಷೇಧವನ್ನು ಹಿಂಪಡೆಯಲಾಗಿದೆ. ಭಾರತದಲ್ಲಿ ಅದ್ಧೂರಿಯಾಗಿ ನಡೆಯುವ ದುರ್ಗಾ ಪೂಜೆ ಆಚರಣೆಯಲ್ಲಿ ಹಿಲ್ಸಾ ಮೀನಿಗೆ ಭಾರೀ ಬೇಡಿಕೆ ಇದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಇದೀಗ ರಫ್ತಿಗೆ ಅನುಮತಿ ನೀಡಿ, ಆದಾಯದತ್ತ ಮುಖಮಾಡಿದೆ







