ಪಾಟ್ನಾ: ಬಿಹಾರದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ಕೋಸಿ ಮತ್ತು ಬಾಗ್ಮತಿ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಳೆದ ಕೆಲವು ದಿನಗಳಿಂದ ನದಿಗಳ ನೀರಿನ ಮಟ್ಟ ನಿರಂತರವಾಗಿ ಏರುತ್ತಿದ್ದು, ತಗ್ಗು ಪ್ರದೇಶಗಳಿಗೆ, ವಿಶೇಷವಾಗಿ ನದಿಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಸಮೀಪಿಸದಂತೆ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಇದೇ ವೇಳೆ ಕೋಸಿ ಅಣ್ಣೆಕಟ್ಟೆಯ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ನದಿ ತುಂಬಿ ಹರಿಯುತ್ತಿದ್ದು ಅಲ್ಲಿನ ಸೇತುವೆಗೆ ತಾಗುತ್ತಿದೆ. ನೀರಿನ ಅಲೆ ಸೇತುವೆಯನ್ನು ತಾಗುತ್ತಿದ್ದಂತೆ ಸೇತುವೆ ಮೇಲಿದ್ದ ಜನರು ಭಯಗೊಂಡು ಕಿರುಚುತ್ತಾ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ವಕ್ತಾರ ರಂಜೀತ್ ರಂಜನ್, ಕೋಸಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಿಂದಾಗಿ ನದಿಯು ಉಕ್ಕಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಸುಪೌಲ್, ಸಹರ್ಸಾ, ಮಾಧೇಪುರ, ಮಧುಬನಿ, ದರ್ಬಂಗಾ, ಖಗರಿಯಾ, ಭಾಗಲ್ಪುರ್, ಕತಿಹಾರ್ ಮತ್ತು ನವಗಚಿಯಾ ಆಸುಪಾಸಿನ ಪ್ರದೇಶದ ನಿವಾಸಿಗಳು ಅಣೆಕಟ್ಟಿನಿಂದ ಮತ್ತು ಜಿಲ್ಲಾಡಳಿತ ಹೊರಡಿಸಿದ ಹೈಅಲರ್ಟ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಹಾಗೂ ಜನರು ತಮ್ಮ ಸುರಕ್ಷತೆಗೆ ಆದ್ಯತೆ ನೀಡಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ
ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಹಾರದಾದ್ಯಂತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ